ಬಾಗೇಪಲ್ಲಿ (ಚಿಕ್ಕಬಳ್ಳಾಪುರ):ಬಸ್ನಲ್ಲಿ ಕಾಲು ತಾಕಿದ್ದಕ್ಕೆ ಮಾತಿನ ಚಕಮಕಿ ತಾರಕಕ್ಕೇರಿದ ಪರಿಣಾಮ ವಿದ್ಯಾರ್ಥಿಗಳ ಗುಂಪೊಂದು ಶಿಕ್ಷಕ ಮತ್ತು ಆತನ ಅಣ್ಣನಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗೇಪಲ್ಲಿ ತಾಲೂಕು ಗೂಳೂರು ಹೋಬಳಿ ಮಾರ್ಗಾನುಕುಂಟೆ ಗ್ರಾಮದಲ್ಲಿ ನಡೆದಿದೆ.
ಶಿಕ್ಷಕ ರಾಜಕುಮಾರ್ ಮತ್ತವರ ಅಣ್ಣ ಶ್ರೀನಿವಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆ ಸಂಬಂಧ 10 ಮಂದಿ ವಿರುದ್ಧ ದೂರು ದಾಖಲಾಗಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯಾರ್ಥಿಯೋರ್ವನಿಗೆ ಕಾಲು ತಾಕಿದೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಶಿಕ್ಷಕ ರಾಜಕುಮಾರ್ ಕ್ಷಮೆ ಕೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿಗಳ ಗುಂಪು ಶಿಕ್ಷಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವಿಚಾರ ರಾಜಕುಮಾರ್ ಅಣ್ಣ ಶ್ರೀನಿವಾಸ್ಗೆ ತಿಳಿದು ಸ್ಥಳಕ್ಕೆ ಬಂದಾಗ ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ.