ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಆರಕ್ಷಕ ಉಪನಿರೀಕ್ಷಕ ಸುನೀಲ್ ಕುಮಾರ್ ತಿಳಿಸಿದರು.
ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ: ಉಪನಿರೀಕ್ಷಕ ಸುನೀಲ್ಕುಮಾರ್
ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜು, ಮಟ್ಕಾ, ಕೋಳಿ ಪಂದ್ಯ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಮಟ್ಟ ಹಾಕುತ್ತೇನೆ ಎಂದು ಆರಕ್ಷಕ ಉಪನಿರೀಕ್ಷಕ ಸುನೀಲ್ ಕುಮಾರ್ ತಿಳಿಸಿದರು.
ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮದ ಪೊಲೀಸ್ ಠಾಣೆಯ ಆವರಣದಲ್ಲಿ ಏರ್ಪಡಿಸಿದ್ದ ದಲಿತರ ಕುಂದು-ಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಜೂಜು, ಮಟ್ಕಾ, ಕೋಳಿ ಪಂದ್ಯ, ಬೆಟ್ಟಿಂಗ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಯಾರೂ ಕೂಡಾ ಭಾಗವಹಿಸಬಾರದು ಎಂದು ಎಚ್ಚರಿಕೆ ನೀಡಿದರು.
ದಿನಗೂಲಿಯಿಂದ ಬರುವ ₹ 300 ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿದರೆ ಸಂಸಾರ ಹೇಗೆ ನಡೆಸುತ್ತೀರಾ? ಆಗ ನಿಮ್ಮ ಸಂಸಾರ ಬೀದಿಗೆ ಬರುತ್ತದೆ. ಅಂತಹ ಪರಿಸ್ಥಿತಿ ನಿಮಗೆ ಬೇಕೆ? ಯಾರಾದರೂ ಪ್ರೋತ್ಸಾಹ ನೀಡಿದರೂ ಅವರ ಮಾತು ಕೇಳಬೇಡಿ. ಒಂದು ವೇಳೆ ಯಾರಾದರೂ ಅಂತಹ ಚಟುವಟಿಕೆಗಳಲ್ಲಿ ತೊಡಗಿದ್ದರೆ, ನಮಗೆ ಮಾಹಿತಿ ಕೊಡಿ. ಹೆಸರನ್ನು ಗೌಪ್ಯವಾಗಿಡುತ್ತೇವೆ ಎಂದು ಅವರು ತಿಳಿಸಿದರು.