ಚಿಕ್ಕಬಳ್ಳಾಪುರ :ಎರಡು ಹೆಣ್ಣುಮಕ್ಕಳು ಆ ದಂಪತಿಗೆ ಪ್ರಾಣವಾಗಿದ್ದರು. ಆದರೆ, ಇಬ್ಬರೂ ಮಕ್ಕಳು ವಯಸ್ಸಿಗೆ ಬಂದ ಮೇಲೆ ಅಂತರ್ಜಾತಿಯ ವಿವಾಹವಾಗಿದ್ದಾರೆ. ಇದು ತಮ್ಮ ಪ್ರತಿಷ್ಠೆಗೆ ತೀವ್ರ ಅವಮಾನ ಎಂದುಕೊಂಡ ತಂದೆ ಮತ್ತು ತಾಯಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬೇವನಹಳ್ಳಿಯಲ್ಲಿ ನಡೆದಿದೆ.
ಜೀವ, ಜೀವನಕ್ಕಿಂತ ಜಾತಿಯೇ ಮುಖ್ಯವಾ.. ಮಕ್ಕಳಿಬ್ಬರ ಅಂತರ್ಜಾತಿ ವಿವಾಹಕ್ಕೆ ಬೇಸತ್ತು ನೇಣಿಗೆ ಶರಣಾದ ದಂಪತಿ
ಹೆಣ್ಣು ಮಕ್ಕಳ ಜೀವನ, ತಮ್ಮ ಜೀವಕ್ಕಿಂತ ಜಾತಿಗೆ ಪ್ರಾಮುಖ್ಯತೆ ಕೊಟ್ಟ ದಂಪತಿ- ಮಕ್ಕಳು ಅಂತರ್ಜಾತಿ ವಿವಾಹವಾದರೆಂದು ನೊಂದಕೊಂಡರು- ಕೊನೆಗೆ ತಮ್ಮದೇ ಹೊಲದಲ್ಲಿ ನೇಣಿಗೆ ಕೊರಳೊಡ್ಡಿದ ಸತಿಪತಿ
ಚೌಡಪ್ಪ (47), ಸುವರ್ಣಮ್ಮ (40) ಆತ್ಮಹತ್ಯೆ ಮಾಡಿಕೊಂಡ ಪೋಷಕರು. ಚೌಡಪ್ಪ-ಸುವರ್ಣಮ್ಮ ದಂಪತಿಗೆ ಮಧುಶ್ರೀ ಹಾಗೂ ಅನುಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಇಬ್ಬರೂ ಬೆಳೆದು ದೊಡ್ಡವರಾದ ಮೇಲೆ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಪ್ರೀತಿಯಿಂದ ಸಾಕಿ ಸಲುಹಿದ ಮಕ್ಕಳೇ ತಮ್ಮ ಮಾತು ಮೀರಿ ಮದುವೆ ಆಗಿರೋದಕ್ಕೆ ಪೋಷಕರು ತೀವ್ರವಾಗಿ ನೊಂದುಕೊಂಡಿದ್ದರು.
ಕಳೆದ 2 ವರ್ಷದ ಹಿಂದೆ ಅನುಶ್ರೀ ಎಂಬ ಹಿರಿಯ ಮಗಳು ಮರಾಠಿ ಹುಡಗನ ಜೊತೆ ಮದುವೆ ಮಾಡಿಕೊಂಡಿದ್ದರು. ಆದ್ರೀಗ ಮತ್ತೊಬ್ಬ ಮಗಳು ಮಧುಶ್ರೀಗೆ ಮದುವೆ ಫಿಕ್ಸ್ ಆಗಿ ಕಲ್ಯಾಣ ಮಂಟಪವನ್ನು ಸಹ ಬುಕ್ ಮಾಡಲಾಗಿತ್ತು. ಆದರೆ, ಮಧುಶ್ರೀ ಮನೆಯಿಂದ ಓಡಿಹೋಗಿ ಅಂತರ್ಜಾತಿ ವಿವಾಹವಾಗಿದ್ದಾಳೆ. ಈ ಎರಡೂ ಮದುವೆಯಿಂದ ಸಾಕಷ್ಟು ಮನನೊಂದ ಪೋಷಕರು ತಮ್ಮದೇ ಹೊಲಕ್ಕೆ ತೆರಳಿದ್ದರು. ಅಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಮಂಚೇನಹಳ್ಳಿ ಠಾಣೆ ಪೊಲೀಸರು ದೌಡಾಯಿಸಿದರು. ಮೃತದೇಹಗಳನ್ನ ಸ್ಥಳೀಯ ಆಸ್ಪತ್ರೆಗೆ ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.