ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈವರೆಗೆ ಹಕ್ಕಿ ಜ್ವರದ ಬಗ್ಗೆ ವರದಿಯಾಗಿಲ್ಲ. ಹಾಗಾಗಿ ಆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರ ಹೊರವಲಯದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಗುರುವಾರ ಎರಡು ವಲಸೆ ಪಕ್ಷಿಗಳು ಮೃತಪಟ್ಟಿದ್ದು, ಮೃತಪಟ್ಟ ಹಕ್ಕಿಗಳನ್ನು ಬೆಂಗಳೂರಿನಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಶೋಧನಾ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. 25 ದಿನಗಳ ಹಿಂದೆ ಇದೇ ಅಮಾನಿ ಗೋಪಾಲ ಕೃಷ್ಣ ಕೆರೆಯಲ್ಲಿ ಮೃತಪಟ್ಟಿದ್ದ ಎರಡು ಹಕ್ಕಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಪ್ರಕಾರ ಈ ಎರಡು ಹಕ್ಕಿಗಳು ಯಾವುದೇ ಸೋಂಕಿನಿಂದ ಮೃತಪಟ್ಟಿರುವುದಿಲ್ಲ ಎಂದು ದೃಢಪಟ್ಟಿದೆ.