ಚಿಕ್ಕಬಳ್ಳಾಪುರ: 14 ಮತ್ತು 15ನೇ ಹಣಕಾಸು ಯೋಜನೆ, ನಗರೋತ್ಥಾನ ಯೋಜನೆ ಹಾಗೂ ಎಸ್‌ಎಫ್‌ಸಿ ಯೋಜನೆಗಳಡಿ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಮತ್ತು ಸಂಪೂರ್ಣವಾಗಿ ಬಳಕೆ ಮಾಡುವ ಮೂಲಕ ಎಲ್ಲಾ ನಗರಗಳನ್ನು ಸ್ವಚ್ಛ, ಸುಂದರ ನಗರಗಳನ್ನಾಗಿ ಪರಿವರ್ತಿಸಬೇಕು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಗೌರಿಬಿದನೂರು ನಗರಸಭೆ ಕಚೇರಿಯಲ್ಲಿ ನಡೆದ ನಗರಸಭೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನಗರೋತ್ಥಾನ ಯೋಜನೆಯನ್ನು ಜಾರಿಗೆ ಮಾಡಿದೆ. ಈ ಯೋಜನೆಯಡಿ ಪ್ರತಿ ನಗರಸಭೆಗೆ ವಾರ್ಷಿಕ 25 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ಗೌರಿಬಿದನೂರಿಗೆ 2019-20ನೇ ಸಾಲಿನಲ್ಲಿ 25 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನುಸಂಪೂರ್ಣವಾಗಿ ಬಳಕೆ ಮಾಡಬೇಕು. ಅಲ್ಲದೇ 14 ಮತ್ತು 15 ನೇ ಹಣಕಾಸು ಮತ್ತು ಎಸ್‌ಎಫ್‌ಸಿ ಅನುದಾನವನ್ನೂ ಕೂಡ ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರೋತ್ಥಾನ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿ ಕೈಗೊಳ್ಳುವ ಯಾವುದೇ ಕಾಮಗಾರಿಗಳು ಗುಣಮಟ್ಟ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ಕ್ರಿಯಾಯೋಜನೆಯಂತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.