ಚಿಕ್ಕಬಳ್ಳಾಪುರ:ಗೌರಿಬಿದನೂರು ತಾಲ್ಲೂಕಿನ ಸೈನಿಕರೊಬ್ಬರು ಇದೀಗ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಬಡ್ತಿ ಹೊಂದಿದ್ದು, ಇದರಿಂದ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ತಮ್ಮ 23 ವರ್ಷಗಳ ಸೇನಾ ಸೇವೆಯಲ್ಲಿ 10 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿ, ಸೇನೆಯಲ್ಲಿಯೇ ಪರೀಕ್ಷೆ ಬರೆದಿರುವ ಹರ್ಷ ರಾಜಶೇಖರ್ ಇದೀಗ ಈ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರ ತಂದೆ ಗೌರಿಬಿದನೂರು ತಾಲ್ಲೂಕಿನ ಕೋಟಾಲದಿನ್ನೆ ಬಳಿ ಇರುವ ಆಕಾಶವಾಣಿ ವೀಕ್ಷಣಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.
ಹರ್ಷ ರಾಜಶೇಖರ್ ಅವರು ನಗರದ ಆಚಾರ್ಯ ಪ್ರೌಢಶಾಲೆಯಲ್ಲಿ ತಮ್ಮ ಬಾಲ್ಯದ ವಿದ್ಯಾಭ್ಯಾಸ ಮುಗಿಸಿ, ನಂತರ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದರು. ಓದುವುದರಲ್ಲಿ ಅಷ್ಟೇನೂ ಬುದ್ಧಿವಂತ ಆಗಿರಲಿಲ್ಲವಾದ್ರೂ, ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಬಾಸ್ಕೆಟ್ ಬಾಲ್ ಅಂದ್ರೆ ಇವರಿಗೆ ಪಂಚಪ್ರಾಣ. 1998ರಲ್ಲಿ ಸ್ಪೋರ್ಟ್ಸ್ ಕೋಟಾದಲ್ಲಿ ಮದ್ರಾಸ್‌ನಲ್ಲಿ ಸಿಪಾಯಿ ಆಗಿ ದೇಶ ಸೇವೆ ಆರಂಭಿಸಿ ಇವರು, ತದನಂತರ ಬೆಂಗಳೂರಿನಲ್ಲೂ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.