ಚಿಕ್ಕಬಳ್ಳಾಪುರ: ಮಕ್ಕಳಿಗೆ ಪಾಠ ಹೇಳುತ್ತಿದ್ದ ಶಿಕ್ಷಕ ತನಗೆ ಅನ್ಯಾಯ ಮಾಡಿದ ಮಗನಿಗೆ ಸರಿಯಾದ ಪಾಠ ಹೇಳುವುದರ ಜೊತೆಗೆ ಇತರೆ ಮಕ್ಕಳಿಗೂ ಸರಿಯಾದ ಪಾಠ ಹೇಳಿದ್ದಾರೆ. ಚಿಕ್ಕವರಿದ್ದಾಗ ಮಕ್ಕಳನ್ನು ಪೋಷಕರು ತುಂಬಾ ಜಾಗೃತಿಯಿಂದ ಕಷ್ಟಪಟ್ಟು ದುಡಿದು ಸಾಕುತ್ತಾರೆ.
ಪೋಷಕರಿಗೆ ವಯಸ್ಸಾದ ಕಾಲದಲ್ಲಿ ನೋಡಿಕೊಳ್ಳಬೇಕಾದ ಸಂದರ್ಭದಲ್ಲೇ ಮನೆಯಿಂದ ಹೊರಹಾಕಿದ್ದ ಮಗನೋರ್ವನಿಗೆ ಕೋರ್ಟ್ ಆದೇಶ ನೀತಿ ಪಾಠ ಕಲಿಸಿದೆ. ಮಗನ ಈ ಕೃತ್ಯದಿಂದ ನೊಂದ ನಿವೃತ್ತ ಪ್ರಾಧ್ಯಾಪಕ ಕೋರ್ಟ್ ಮೆಟ್ಟಿಲೇರಿದಾಗ ನ್ಯಾಯ ಸಿಕ್ಕಿದೆ. ತಪ್ಪು ಮಾಡಿದ ಆತನ ಮಗನನ್ನೇ ನ್ಯಾಯಾಲಯ ಹೊರಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ಚಿಂತಾಮಣಿ ನಗರದ ಅಂಜನಿ ಬಡಾವಣೆಯಲ್ಲಿ ಈ ಪ್ರಕರಣ ನಡೆದಿದೆ. ಅಸಲಿಗೆ ಮುನಿಸ್ವಾಮಿ ಎಂಬ ವೃದ್ಧ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ. ತಾನು ಕೆಲಸ ಮಾಡುವ ಸಮಯದಲ್ಲಿ ತನ್ನ ಸ್ವಂತ ಹಣದಲ್ಲಿ ಒಂದು ಮನೆಯನ್ನು ಖರೀದಿಸಿದ್ದರು. ಬಳಿಕ ಕೆಲಸದಿಂದ ನಿವೃತ್ತಿ ಹೊಂದಿದ್ದ ಮುನಿಸ್ವಾಮಿ ತನ್ನ ಮಗನಾದ ಎಂ. ಸುಭಾಷ್ ಮತ್ತು ಸೊಸೆ ಮಂಜುಳಾ ಜೊತೆಗೆ ವಾಸವಿದ್ದರು. ನಂತರ ಕಳೆದ ಒಂದು ವರ್ಷದ ಹಿಂದೆ ಮಗ ಮತ್ತು ಸೊಸೆ ಸೇರಿ ಮನೆಯಿಂದ ಮುನಿಸ್ವಾಮಿ ಅವರನ್ನು ಹೊರಗೆ ಹಾಕಿದ್ದರು. ಹಾಗಾಗಿ, ತಾನು ಕಷ್ಟ ಪಟ್ಟು ದುಡಿದು ಕಟ್ಟಿದ ಮನೆಯಿಂದ ಹೊರ ಹಾಕಿದ ಕಾರಣ ವೃದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈಗ ಕೋರ್ಟ್ ಆದೇಶದಂತೆ ಮಗ ಮತ್ತು ಸೊಸೆಯನ್ನು ಮುನಿಸ್ವಾಮಿ ಹೊರಗೆ ಹಾಕಿದ್ದಾರೆ.
ಮೊದಲು ನ್ಯಾಯಕ್ಕಾಗಿ ಹೈಕೋರ್ಟ್ಗೆ ಹೋಗಿದ್ದರು. ಅಲ್ಲಿಂದ ಚಿಕ್ಕಬಳ್ಳಾಪುರ ಎಸಿ ಕೋರ್ಟ್ಗೆ ತೆರಳಿ ಈಗ ತನ್ನ ಪರವಾಗಿ ಆದೇಶ ಬಂದ ಕಾರಣ ಪೊಲೀಸರ ನೆರವಿನಿಂದ ಮಗ ಮತ್ತು ಸೊಸೆಯನ್ನು ಮನೆಯಿಂದ ಹೊರಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.