ಚಿಕ್ಕಬಳ್ಳಾಪುರ:ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿಯೊಂದಿಗೆ ಸರ್ಕಾರಿ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕಿಯೊಬ್ಬರು ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಶಿಕ್ಷಣ ಇಲಾಖೆ ಮುಖ್ಯ ಶಿಕ್ಷಕಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.
ನಡೆದಿದ್ದೇನು?: ಚಿಂತಾಮಣಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಿಂದ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಂದಿಗೆ ತನ್ನ ಮೊಬೈಲ್‌ನಲ್ಲಿ ಶಿಕ್ಷಕಿ ಫೋಟೋಗಳನ್ನು ಸೆರೆ ಹಿಡಿದುಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಫೋಟೋಗಳು ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶಿಸ್ತು ಕ್ರಮಕ್ಕೆ ಬಿಇಒ ಶಿಫಾರಸು:ಶಿಕ್ಷಕಿಯ ವಿರುದ್ಧ ಕೇಳಿಬಂದ ಗಂಭೀರ ಆರೋಪ ಹಾಗು ಪೋಷಕರು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಚಿಂತಾಮಣಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರವಾಸಕ್ಕೆ ತೆರಳಿದ್ದ ಶಾಲಾ ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಮುಖ್ಯ ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಫೋಟೋ ತೆಗೆಸಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಅವರೆಲ್ಲ ಹೇಳಿಕೆ ನೀಡಿದ್ದರು. ಹೀಗಿದ್ದರೂ, ಶಿಕ್ಷಕರ ನಡವಳಿಕೆಗಳಿಗೆ ವಿರುದ್ಧವಾಗಿ ವರ್ತಿಸಿರುವ ಆರೋಪದ ಹಿನ್ನೆಲೆಯಲ್ಲಿ ಬಿಇಒ ವರದಿಯಲ್ಲಿ ಮಾಡಿರುವ ಶಿಫಾರಸಿನಂತೆ ಇಲಾಖಾ ವಿಚಾರಣೆಗೆ ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ(ಡಿಡಿಪಿಐ) ಪಿ.ಬೈಲಾಂಜನಪ್ಪ ಈ ಕುರಿತು ಆದೇಶ ಹೊರಡಿಸಿದ್ದಾರೆ.
"ಶಾಲಾ ಪ್ರವಾಸದಲ್ಲಿ ಮನರಂಜನೆಗೋಸ್ಕರ ಹಾಡುಗಳನ್ನು ಹಾಡಿಸುತ್ತಿದ್ದಾಗ ಫೋಟೋ ಕ್ಲಿಕ್ಕಿಸಿಕೊಂಡಿದ್ದೇವೆ. ಮಕ್ಕಳನ್ನು ಕೆಟ್ಟ ಉದ್ದೇಶದಿಂದ ನಡೆಸಿಕೊಂಡಿಲ್ಲ. ಕೆಟ್ಟ ಉದ್ದೇಶದಿಂದ ವರ್ತಿಸಿಲ್ಲ" ಎಂದು ಮುಖ್ಯ ಶಿಕ್ಷಕಿ ಹೇಳಿರುವುದಾಗಿ ಎಂದು ಡಿಡಿಪಿಐ ಹೊರಡಿಸಿದ ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಕೋಲಾರ: ವಿದ್ಯಾರ್ಥಿಗಳಿಂದ ಶೌಚಗುಂಡಿ ಸ್ವಚ್ಚತೆ, ಮತ್ತಿಬ್ಬರ ಬಂಧನ