ಕರ್ನಾಟಕ

karnataka

ETV Bharat / state

17ನೇ ವಯಸ್ಸಿನಿಂದಲೇ ತಮಟೆ ವಾದನ: ಚಿಕ್ಕಬಳ್ಳಾಪುರದ ಸಾಧಕನಿಗೆ ಒಲಿಯಿತು ಪದ್ಮಶ್ರೀ - ಈಟಿವಿ ಭಾರತ ಕನ್ನಡ ನ್ಯೂಸ್​​

ಚಿಕ್ಕಬಳ್ಳಾಪುರದ ಸಾಧಕನಿಗೆ ಒಲಿಯಿತು ಪದ್ಮಶ್ರೀ - ಶಿಡ್ಲಘಟ್ಟ ತಾಲೂಕಿನ ಮುನಿವೆಂಕಟಪ್ಪನವರಿಗೆ ಪದ್ಮಶ್ರೀ ಗರಿ - ದೇಶ ವಿದೇಶಗಳಲ್ಲಿ ತಮಟೆ ವಾದನ ಮಾಡಿರುವ ಸಾಧಕ

chikkaballapur-munivenkatappa-conferred-with-padmashree
17ನೇ ವಯಸ್ಸಿನಿಂದಲೇ ತಮಟೆ ವಾದನ : ಚಿಕ್ಕಬಳ್ಳಾಪುರದ ಸಾಧಕನಿಗೆ ಒಲಿಯಿತು ಪದ್ಮಶ್ರೀ

By

Published : Jan 26, 2023, 10:52 PM IST

Updated : Jan 27, 2023, 1:30 PM IST

17ನೇ ವಯಸ್ಸಿನಿಂದಲೇ ತಮಟೆ ವಾದನ : ಚಿಕ್ಕಬಳ್ಳಾಪುರದ ಸಾಧಕನಿಗೆ ಒಲಿಯಿತು ಪದ್ಮಶ್ರೀ

ಚಿಕ್ಕಬಳ್ಳಾಪುರ: ತಮಟೆ ಸದ್ದು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಂಥವರನ್ನು ಕುಣಿಸಬಲ್ಲ ಸಾಮರ್ಥ್ಯ ಈ ತಮಟೆ ಸದ್ದಿಗಿದೆ. ತಮಟೆ ಸದ್ದಿನಿಂದ ಈಗ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮುನಿವೆಂಕಟಪ್ಪನವರು ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಆದರೆ, ತಮ್ಮ ಬಡ ಕುಟುಂಬಕ್ಕೆ ಸರ್ಕಾರ ನೆರವಾಗಬೇಕು ಎಂದು ಮುನಿವೆಂಕಟಪ್ಪನವರು ಮನವಿ ಮಾಡಿಕೊಂಡಿದ್ದಾರೆ.

17ನೇ ವಯಸ್ಸಿನಿಂದಲೇ ತಮಟೆ ವಾದನ :ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿ ಪಾಪನಹಳ್ಳಿಯಲ್ಲಿ ಮುನಿವೆಂಕಟಪ್ಪ ಅವರು ಜನಿಸಿದರು. ತಂದೆ ತಮಟೆ ಪಾಪಣ್ಣ ಮತ್ತು ತಾಯಿ ಮುನಿಗಂಗಮ್ಮ.ತಮ್ಮ 17ನೇ ವಯಸ್ಸಿನಲ್ಲಿ ಮುನಿವೆಂಕಟಪ್ಪನವರು ತಮಟೆ ಬಾರಿಸುವುದನ್ನುಕಲಿಯಲು ಆರಂಭಿಸಿದರು.ಇವರು ಮೊದಲು ಮನೋರಂಜನೆಗಾಗಿ ತಮಟೆ ಕಲಿಯಲು ಆರಂಭಿಸಿದರು. ಬಳಿಕ ಇದನ್ನೇ ಹವ್ಯಾಸವಾಗಿ ಬೆಳೆಸಿಕೊಂಡ ಇವರು ಜೀವನೋಪಾಯಕ್ಕೂ ಇದನ್ನು ನೆಚ್ಚಿಕೊಂಡರು. ಇನ್ನು ತಮಟೆ ಬಾರಿಸಿ ಬಂದ ಹಣದಿಂದ ಜೀವನ ನಡೆಸುತ್ತಿದ್ದರು. ಇವರು ತಮಟೆ ಬಾರಿಸುವುದನ್ನು ಗಮನಿಸಿದ ಗ್ರಾಮಸ್ಥರು ಗ್ರಾಮಗಳಲ್ಲಿ ನಡೆಯುವ ಜಾತ್ರೆ ಸಮಾರಂಭಗಳಿಗೆ ಮುನಿ ವೆಂಕಟಪ್ಪನವರನ್ನು ಕರೆಯಲು ಆರಂಭಿಸಿದರು.

ಅಷ್ಟೇ ಅಲ್ಲದೆ ಮುನಿವೆಂಕಟಪ್ಪ ಅವರು ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ದಶಕಗಳ ಹಿಂದೆ ತಮಟೆಯನ್ನು ಹಿಡಿದು ಬಸ್ ಹತ್ತಿದ ವೇಳೆ ಬಸ್ಸಿನಿಂದ ಇಳಿಸಿದ ಪ್ರಸಂಗವೂ ಇವರ ಮನಸ್ಸಿಗೆ ಘಾಸಿಯನ್ನುಂಟು ಮಾಡಿತ್ತು. ಆದರೆ, ಈ ಎಲ್ಲ ಅವಮಾನಗಳನ್ನು ಲೆಕ್ಕಿಸದೇ ತನ್ನ ಪ್ರತಿಭೆಯ ಮೇಲೆ ನಂಬಿಕೆಯನ್ನು ಇಟ್ಟು ಮುನ್ನಡೆದರು.

ತಮಟೆ ವಾದಕ ಮುನಿವೆಂಕಟಪ್ಪ

ಇದನ್ನೂ ಓದಿ :ಎಂಟು ಕನ್ನಡಿಗರಿಗೆ ಪದ್ಮ ಪುರಸ್ಕಾರ: ಎಸ್​ಎಂ ಕೃಷ್ಣಗೆ ಪದ್ಮವಿಭೂಷಣ, ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ

ಪದ್ಮಶ್ರೀ ಸೇರಿ ಐವತ್ತಕ್ಕೂ ಹೆಚ್ಚು ಪ್ರಶಸ್ತಿ:ತನ್ನ ಕಲೆಯನ್ನು ನೆಚ್ಚಿಕೊಂಡ ಮುನಿ ವೆಂಕಟಪ್ಪನವರಿಗೆ ಇಂದು ಐವತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಅರಸಿಬಂದಿದೆ. ಈ ಕಲೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ತಂಡಗಳನ್ನ ರಚಿಸಿಕೊಂಡು ಯುವಜನತೆಗೆ ತಮಟೆ ತರಬೇತಿಯನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಇಂದು ಗಮನವನ್ನು ಸೆಳೆದಿದ್ದಾರೆ.

ಇನ್ನು ಮುನಿವೆಂಕಟಪ್ಪ ಅವರ ತಮಟೆ ವಾದ್ಯ ಕೋಲಾರ,ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ರಾಜ್ಯ ಸರ್ಕಾರ ಯೋಜನೆ ಮಾಡುವ ಉತ್ಸವಗಳಾದ ಮೈಸೂರು ದಸರಾ, ಇಲಾಖೆಯಿಂದ ನಡೆಸುವ ರಾಷ್ಟ್ರೀಯ ಕ್ರೀಡಾಕೂಟ, ಜಿಲ್ಲಾ ಉತ್ಸವಗಳಲ್ಲಿ ಮತ್ತು ತಮಿಳುನಾಡು ಆಂಧ್ರಪ್ರದೇಶಗಳಲ್ಲಿ ತಮಟೆ ಪ್ರದರ್ಶನಗಳಲ್ಲೂ ಇವರು ತಮಟೆ ವಾದನ ಮಾಡಿದ್ದಾರೆ.

ತಮಟೆ ವಾದಕ ಮುನಿವೆಂಕಟಪ್ಪ

ವಿವಿಧ ದೇಶಗಳಲ್ಲಿ ತಮಟೆ ವಾದನ ಪ್ರದರ್ಶನ :ಇನ್ನು 2014ರಲ್ಲಿ ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಮುನಿವೆಂಕಟಪ್ಪ ತಮ್ಮ ತಮಟೆ ಪ್ರದರ್ಶನ ಮಾಡಿದ್ದರು. ಇನ್ನು 2015 ರಲ್ಲಿ ಅಮೆರಿಕದಲ್ಲಿ ನಡೆದ ನಾವಿಕ ಸಮ್ಮೇಳನದಲ್ಲಿಯೂ ಇವರ ತಮಟೆ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ತಮ್ಮ ತಮಟೆ ವಾದ್ಯ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಶಿಡ್ಲಘಟ್ಟ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಕಲಾಭವನ ನಿರ್ಮಿಸಿ ಯುವಜನತೆಗೆ ತಮಟೆ ಕಲಿಕೆಗೆ ಪ್ರೋತ್ಸಾಹಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ತನ್ನ ಕುಟುಂಬದ ಪೋಷಣೆಗೆ ಏನಾದರೂ ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ :ಇಂಡೋ - ಪಾಕ್ ಯುದ್ಧದಲ್ಲಿ ಸೇವೆ ಸಲ್ಲಿಸಿದ 20 ರೂಪಾಯಿ ವೈದ್ಯನಿಗೆ ಸಂದ ಪದ್ಮಶ್ರೀ ಪ್ರಶಸ್ತಿ

Last Updated : Jan 27, 2023, 1:30 PM IST

ABOUT THE AUTHOR

...view details