ಚಿಕ್ಕಬಳ್ಳಾಪುರ: ತಾಯಿ ಫೋನ್ ಕೊಡಿಸಲಿಲ್ಲ ಎಂದು ನೊಂದ ಬಾಲಯೋರ್ಕಿವಳು ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ. ದೊಣ್ಣಹಳ್ಳಿ ಗ್ರಾಮದ ರಜನಿ (17) ಆತ್ಮಹತ್ಯೆಗೆ ಶರಣಾಗಿರುವ ಬಾಲಕಿ ಎಂದು ತಿಳಿದುಬಂದಿದೆ.
ಮೊಬೈಲ್ ಕೊಡಿಸಲಿಲ್ಲವೆಂದು ಮನನೊಂದ ಬಾಲಕಿ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ
ಶಿಡ್ಲಘಟ್ಟ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಮೃತದೇಹ ಪತ್ತೆಯಾಗಿದೆ.
ಫೋನ್ ಕೊಡಿಸಲಿಲ್ಲವೆಂದು ಮೇ 21 ರಂದು ಬೆಳಗ್ಗೆ ತಾಯಿ ಜೊತೆ ಮುನಿಸಿಕೊಂಡಿದ್ದ ರಜನಿ ಮನೆ ತೊರೆದಿದ್ದಳು. ಸಿಟ್ಟಿನಲ್ಲಿ ತನ್ನ ಮಗಳು ಸಂಬಂಧಿಕರ ಮನೆಗೆ ಹೋಗಿರಬಹುದೆಂದು ತಾಯಿ ಮುನಿರತ್ನ ಸುಮ್ಮನಿದ್ದಳು. ಆದರೆ, ಇಂದು ಬೆಳಗ್ಗೆ ಮನೆ ಸಮೀಪದ ಕೃಷಿ ಹೊಂಡದಲ್ಲಿ ರಜನಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಹಲವು ವರ್ಷಗಳ ಹಿಂದೆ ತನ್ನ ಮಗ ಮಂಜು ಹಾಗೂ ಪತಿ ವೆಂಕಟೇಶ್ ಅವರನ್ನು ಮುನಿರತ್ನ ಕಳೆದುಕೊಂಡಿದ್ದಳು. ಇದೀಗ ಕೊನೆಯದಾಗಿ ಇದ್ದ ಮಗಳನ್ನೂ ಕಳೆದುಕೊಂಡು ರೋದಿಸುತ್ತಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.