ಚಾಮರಾಜನಗರ: ದೇವಸ್ಥಾನಕ್ಕೆ ಇಂತಹದ್ದನ್ನೇ ತಿಂದು ಹೋಗಬೇಕು ಎಂದು ಯಾರೂ ಹೇಳಿದ್ದಾರೆ. ಅಲ್ಲಿಗೆ ಬರುವ ಪ್ರತಿಯೊಬ್ಬರನ್ನು ಚೆಕ್ ಮಾಡಲು ಆಗುತ್ತಾ?. ಆಹಾರ ಸೇವನೆ ಅವರವರ ಇಚ್ಚೆ, ಮಾಧ್ಯಮಗಳು ಈ ಬಗ್ಗೆ ಪ್ರಶ್ನೆ ಮಾಡುವುದು ತಪ್ಪು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಕಾಂಗ್ರೆಸ್ ಪಾದಯಾತ್ರೆ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವಿವಾದ ಸೃಷ್ಟಿಸಲು ಈ ರೀತಿ ಹೇಳುತ್ತಿದ್ದಾರೆ. ನೀವ್ಯಾಕೆ ಅದನ್ನು ನಮಗೆ ಕೇಳುತ್ತೀರಿ. ಅವರ ಪ್ರಶ್ನೆಗೆ ಉತ್ತರ ಕೊಡುವ ಅಗತ್ಯ ನಮಗಿಲ್ಲ. ನಮಗೆ ಜನರ ವಿಚಾರ ಮುಖ್ಯ. ಯಾರೂ ಏನು ತಿಂತಾರೆ ಅನ್ನೋದು ಮುಖ್ಯವಲ್ಲ ಎಂದು ಅಸಮಾಧಾನ ಹೊರಹಾಕಿದರು.
ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ: ಶಾಸಕ ಜಮೀರ್ ಅಹ್ಮದ್ ಅವರಿಗೆ ಹಂದಿ ಮಾಂಸ ತಿನ್ನುವಂತೆ ಹೇಳಿ ಎಂದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ತಂದೆ ಬೀಫ್ ತಿನ್ನೋದಿಲ್ಲ. ಬೇರೆಯವರನ್ನು ಬೀಫ್ ತಿನ್ನಿ ಅಂತಾ ಹೇಳೋಕಾಗುತ್ತಾ?. ಅವರ ನಂಬಿಕೆ ಪ್ರಕಾರ ತಿಂತಾರೆ. ತಂದೆ ಹಂದಿನೂ ತಿನ್ನಲ್ಲ, ಬೀಫ್ ಕೂಡ ತಿನ್ನಲ್ಲ. ಬಲವಂತವಾಗಿ ಪ್ರತಾಪ್ ಸಿಂಹ ಬಂದು ತಿನ್ನಿಸಲು ಆಗುತ್ತಾ. ಆಹಾರ ಸೇವನೆ ಬಗ್ಗೆ ಚರ್ಚೆ ಮಾಡೋದು ಅನಗತ್ಯ, ಬಿಜೆಪಿಯವರು ವೈಫಲ್ಯ ಮುಚ್ಚಿಕೊಳ್ಳಲು ಅನಗತ್ಯವಾಗಿ ಇದನ್ನು ಸೃಷ್ಟಿ ಮಾಡಿದ್ದಾರೆ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ:ವಿವಾದ ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರು.. ಮಾಂಸ ವಿವಾದಕ್ಕೆ ಆರ್ ಧ್ರುವನಾರಾಯಣ ಕಿಡಿ