ಕೊಳ್ಳೇಗಾಲ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕರಿಗೆ ನೀಡಿದ್ದ ಉಚಿತ ಆಹಾರ ಪದಾರ್ಥಗಳ ಕಿಟ್ನಲ್ಲಿರುವ ಕೆಲವು ಪದಾರ್ಥಗಳಲ್ಲಿ ಹುಳುಕಾಣಿಸಿಕೊಂಡು ಅವಧಿ ಮುಗಿದಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಕಾರ್ಮಿಕರಿಗೆ ಹಂಚಿದ್ದ ಆಹಾರ ಪದಾರ್ಥಗಳಲ್ಲಿ ಹುಳು ಪತ್ತೆ!
ಕೊವೀಡ್-19 ಸಂಕಷ್ಟದಿಂದ ಇನ್ನೂ ಚೇತರಿಕೆ ಕಾಣದ ಪರಿಸ್ಥಿತಿಯಲ್ಲಿ ಕಾರ್ಮಿಕ ಇಲಾಖೆಯು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ನೀಡಿತ್ತು. ಆದರೆ ಕಿಟ್ನಲ್ಲಿರುವ ಕೆಲವು ಪದಾರ್ಥಗಳಲ್ಲಿ ಹುಳು ಕಾಣಿಸಿಕೊಂಡಿದ್ದು. ಅವಧಿ ಮುಗಿದ ವಸ್ತು ನೀಡಿರುವುದು ಬೆಳಕಿಗೆ ಬಂದಿದೆ.
ನಿನ್ನೆ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾರ್ಮಿಕ ಇಲಾಖೆ ಮೂಲಕ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್ -19ನ ನೆರವು ಉದ್ದೇಶದಿಂದ ಆಹಾರ ಪದಾರ್ಥಗಳ ಕಿಟ್ ನೀಡಲಾಗಿತ್ತು. ಕಾರ್ಯಕ್ರಮವನ್ನು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಉದ್ಘಾಟಿಸಿ ಸಾಂಕೇತಿಕವಾಗಿ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸಿದ್ದರು. ಆದ್ರೆ ಇದೀಗ ವಿತರಿಸಿದ ಕಿಟ್ನಲ್ಲಿರುವ ಕೆಲವು ಸಾಮಾಗ್ರಿ ಕಳಪೆಯಾಗಿದ್ದು, ಬೆಳೆ, ಗೋಧಿ, ರವೆ ಪದಾರ್ಥಗಳಲ್ಲಿ ಹುಳು ಕಾಣಿಸಿಕೊಂಡಿದೆ.
ಅಕ್ಕಿ, ಬೇಳೆ, ಗೋಧಿ ಹಿಟ್ಟು, ಸಕ್ಕರೆ, ಉಪ್ಪು, ಸಾಂಬರ್ ಪೌಡರ್, ಅಡುಗೆ ಎಣ್ಣೆ, ಸಾಬೂನು ನೀಡಲಾಗಿದೆ. ಬಡ ಕಾರ್ಮಿಕರಿಗೆ ನೆರವಿನ ಸಹಾಯ ಚಾಚಿ ಕಳಪೆ ಹಾಗೂ ಅವಧಿ ಮುಗಿದ ಪದಾರ್ಥ ನೀಡಿರುವುದು ಕಾರ್ಮಿಕರಿಗೆ ಬೇಸರ ತಂದಿದೆ. ಈ ವಿಚಾರ ತಿಳಿದ ಕಾರ್ಮಿಕ ಇಲಾಖೆ ನೌಕರರು ಕಳಪೆ ಪದಾರ್ಥ ಹಂಚಿಕೆಯಾಗುತ್ತಿದೆ ಎಂಬ ವದಂತಿ ತಿಳಿಯುತ್ತಿದಂತೆ ಪ್ಯಾಕ್ ಮಾಡಿದ್ದ ಸಾವಿರಾರು ಕಿಟ್ಗಳನ್ನು ಬಿಚ್ಚಿ ಕಳಪೆ ಪದಾರ್ಥಗಳನ್ನು ತೆಗೆದು, ಮಿಕ್ಕ ಕೆಲವು ಆಹಾರ ಪದಾರ್ಥಗಳನ್ನು ಕಾರ್ಮಿಕರಿಗೆ ಹಂಚುತ್ತಿದ್ದಾರೆ.