ಸೋಮಣ್ಣ ಇಲ್ಲದೆಯೂ ಚುನಾವಣೆ ಗೆದ್ದಿದ್ದೇವೆ, ಸೋಮಣ್ಣ ಪುತ್ರನಿಗೆ ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ತಿರುಗೇಟು..
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜನ್ಮದಿನದ ಪ್ರಯುಕ್ತ ಕೆಆರ್‌ಐಡಿಎಲ್ ಅಧ್ಯಕ್ಷ ಎಂ ರುದ್ರೇಶ್ ಅವರು ಚಾಮರಾಜನಗರ ಜಿಲ್ಲೆಯ ರೈತರಿಗೆ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸಿದರು.
ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಸುದ್ದಿಗಾರರೊಂದಿಗೆ ಮಾತನಾಡಿದರು.
By
Published : Mar 17, 2023, 8:14 PM IST
|
Updated : Mar 17, 2023, 10:38 PM IST
ಕೆಆರ್‌ಐಡಿಎಲ್ ಅಧ್ಯಕ್ಷ ಎಂ ರುದ್ರೇಶ್
ಚಾಮರಾಜನಗರ:ಸೋಮಣ್ಣ ಇಲ್ಲದೆಯೂ ರಾಮನಗರದಲ್ಲಿ ಸ್ಥಳೀಯ ಚುನಾವಣೆಗಳನ್ನು ಗೆದ್ದಿದ್ದೇವೆ ಎಂದು ವಿಜಯೇಂದ್ರ ಆಪ್ತ, ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಅವರು ಸಚಿವ ಸೋಮಣ್ಣ ಪುತ್ರನಿಗೆ ತಿರುಗೇಟು ಕೊಟ್ಟರು. ಚಾಮರಾಜನಗರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸಿ ಮಾತನಾಡಿದ ಅವರು, ಅರುಣ್ ಸೋಮಣ್ಣ ತಂದೆಯ ನೆರಳಲ್ಲಿ ಬೆಳೆದು, ರಾಜಕೀಯ ನೋಡಿರುವಂತಹವರು. ಸಂಘಟನೆ ಎಂದರೇನು ಎನ್ನುವುದನ್ನು ತಿಳಿದು ಅವರು ಮಾತನಾಡಲಿ ಎಂದು ತಮ್ಮ ವಿರುದ್ಧ ಮಾಡಿದ್ದ ಟೀಕೆಗಳಿಗೆ ಪ್ರತ್ಯುತರ ನೀಡಿದರು.
ಎಲ್ಲೂ ಗೆಲ್ಲಲಿಕ್ಕೆ ಆಗದಿರುವವರು, ಗ್ರಾಮ ಪಂಚಾಯಿತಿಯಲ್ಲೂ ಗೆಲ್ಲದಿರುವವರು ಚಾಮರಾಜನಗರಕ್ಕೆ ಓಡಿ ಬಂದಿದ್ದಾರೆ ಎನ್ನುವ ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ರುದ್ರೇಶ್, ಸೋಮಣ್ಣ ಅವರ ಊರು ಕನಕಪುರದಲ್ಲಿ ನಾಲ್ಕು ಗ್ರಾಮ ಪಂಚಾಯಿತಿ ಸದಸ್ಯರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ ಎಂದರು.
ರಾಮನಗರ ಜಿಲಾಧ್ಯಕ್ಷ ಆಗಿದ್ದ ಸಂದರ್ಭದಲ್ಲಿ ಸೋಮಣ್ಣ ಅವರ ಸಹಕಾರ ಇಲ್ಲದೆಯೂ ಚುನಾವಣೆ ಗೆದ್ದಿದ್ದೇವೆ. ಪಂಚಾಯತಿಗೆ ನಿಂತು ಗೆಲ್ಲುವ ಹಂತ ಮುಗಿದು ಹೋಗಿದೆ. ಯಾರನ್ನು ಗೆಲ್ಲಿಸಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡು ಬೂತ್ ಮಟ್ಟದಿಂದ ಬೆಳೆದು ಬಂದಿದ್ದೇವೆ. ಹೀಗಾಗಿ ನಾನು ಎಲ್ಲೂ ಓಡಿ ಬಂದವನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತನಾಗಿ, ಬೂತ್ ಮಟ್ಟದ ಅಧ್ಯಕ್ಷನಾಗಿ, ಯುವ ಮೋರ್ಚಾಗಳಲ್ಲಿ ಕೆಲಸ ನೋಡಿ ಬಂದ ನನ್ನನ್ನು ಪಕ್ಷ ಗುರುತಿಸಿ, ಮೊದಲು ನನ್ನನ್ನು ಕಂಠೀರವ ಸ್ಟುಡಿಯೋ ಅಧ್ಯಕ್ಷನನ್ನಾಗಿ ಮಾಡಿತು. ಈಗ ಕೆಆರ್ಐಡಿಎಲ್ ಅಧ್ಯಕ್ಷನನ್ನಾಗಿ ಮಾಡಿದೆ. ಎಲ್ಲಿಯೂ ಲೋಪ ಬಾರದ ಹಾಗೆ, ಪಕ್ಷಕ್ಕೆ ಕೆಟ್ಟ ಹೆಸರು ಬಾರದ ಹಾಗೆ ಒಳ್ಳೆಯ ಹೆಸರು ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ವಿರುದ್ಧವೂ ಟೀಕೆ: ಚಾಮರಾಜನಗರದಲ್ಲಿ ಒಗ್ಗಟ್ಟು ಇದ್ದಿದ್ದರೆ ಇಷ್ಟುದಿನ ಕಾಂಗ್ರೆಸ್ ಗೆಲ್ಲಲು ಬಿಟ್ಟಿರುವುದಾದರು ಏಕೆ ?. ಇಷ್ಟು ದಿನ ಇಲ್ಲಿಗೆ ಬೇರೆಯವರು ಬಂದಿದ್ದರೇನು, ಇಲ್ಲಿ ಸ್ಥಳೀಯರೇ ಇದ್ದವರು. ಅವರು ಏಕೆ ಸೋಲುತ್ತಿದ್ದಾರೆ ಎಂದು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ವಿರುದ್ಧ ಕಿಡಿಕಾರಿದರು. ಚಾಮರಾಜನಗರದಲ್ಲಿ 10 ಜನ ಆಕಾಂಕ್ಷಿಗಳಿದ್ದಾರೆ. ಸ್ಥಳೀಯರಿಗೆ ಟಿಕೆಟ್ ಎಂಬ ಒತ್ತಾಯದ ಕುರಿತು ಮಾತನಾಡಿ, ಪಕ್ಷದ ಸಿದ್ಧಾಂತ ಇಲ್ಲದಿರುವವರು ಗೊಂದಲ ಸೃಷ್ಟಿಸಿಕೊಳ್ಳುತ್ತಿದ್ದಾರೆ.
ಚಾಮರಾಜನಗರದಲ್ಲಿ ಕಾರ್ಯಕರ್ತರ ಚುನಾವಣೆಯಾಗಲಿದೆಯೇ ಹೊರತು ನಾಯಕರ ಚುನಾವಣೆಯಾಗುವುದಿಲ್ಲ. ಈ ಬಾರಿ ಕಾರ್ಯಕರ್ತರು ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು. ಎಲ್ಲ ಪಕ್ಷಗಳಲ್ಲೂ ಆಕಾಂಕ್ಷಿಗಳಿರುವುದು ಸಹಜ, ಒಬ್ಬ ಗಟ್ಟಿ ಕಾರ್ಯಕರ್ತ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ಸಿಗಲಿದ್ದಾರೆ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ವಿರುದ್ಧ ಬಹಿರಂಗವಾಗಿ ಕೆಂಡಕಾರಿದರು.
ಜಿಲ್ಲೆಯ 15 ಫಲಾನುಭವಿಗಳಿಗೆ ಟ್ರ್ಯಾಕ್ಟರ್ ಕೀ ಹಸ್ತಾಂತರ ಮಾಡಿದರು. ರಾಜ್ಯದ ವಿವಿಧೆಡೆ ಬಿ ಎಸ್ ಯಡಿಯೂರಪ್ಪ ಅವರ ಜನ್ಮದಿನದ ಪ್ರಯುಕ್ತ 80 ಟ್ರ್ಯಾಕ್ಟರ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಟ್ರ್ಯಾಕ್ಟರ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜನ್ಮದಿನದ ಪ್ರಯುಕ್ತ ಕೆಆರ್‌ಐಡಿಎಲ್ ಅಧ್ಯಕ್ಷ ಎಂ ರುದ್ರೇಶ್ ಅವರು ರಿಯಾಯಿತಿ ದರದಲ್ಲಿ ರೈತರಿಗೆ ಟ್ರ್ಯಾಕ್ಟ್ ರ್ ಗಳನ್ನು ವಿತರಿಸಿದರು.