ಚಾಮರಾಜನಗರ:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಉಗ್ರ ಹೋರಾಟ ಮಾಡುವುದಾಗಿ ವೀರಶೈವ ಲಿಂಗಾಯತ ಮುಖಂಡ ಕೊಡಸೋಗೆ ಶಿವಬಸಪ್ಪ ಅವರು ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ವೀರಶೈವ ಸಮಾಜ ಬಿಜೆಪಿಯಿಂದ ದೂರವಾಗಲಿದ್ದು, ರಾಜ್ಯದಲ್ಲಿ ಬಿಜೆಪಿ ನೆಲಕಚ್ಚುತ್ತದೆ ಎಂದರು.
ಯಡಿಯೂರಪ್ಪ ಅವರಿಗೆ ಪ್ರತಿಪಕ್ಷದವರಿಗಿಂತ ಸ್ವಪಕ್ಷೀಯರೇ ನಿರಂತರವಾಗಿ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದಾರೆ ಎಂದು ಕಿಡಿಕಾರಿದರು. ಯಡಿಯೂರಪ್ಪ ಅವರೇ ತಂದುಕೊಟ್ಟಿರುವ ಅಧಿಕಾರವನ್ನು ಉಳಿದ ಅವಧಿಗೂ ಪೂರೈಸಲು ಅವಕಾಶ ನೀಡಬೇಕು. ರಾಜೀನಾಮೆ ಕೊಡಬೇಕೆಂದು ಹೇಳುವುದನ್ನು ಬಿಟ್ಟು ಬಿಎಸ್ವೈಗೆ ಸಚಿವರುಗಳು ಸಹಕಾರ ನೀಡಬೇಕೆಂದು ಹೈಕಮಾಂಡ್ ತಾಕೀತು ಮಾಡಲಿ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ಕೆಳಗಿಸಿದರೆ ರಾಜ್ಯದಲ್ಲಿರುವ ಬಿಜೆಪಿಗೆ ಅಧಿಕಾರವೂ ಹೋಗುತ್ತದೆ. ಭವಿಷ್ಯದಲ್ಲಿ ವೀರಶೈವ ಸಮಾಜ ಬಿಜೆಪಿಯನ್ನು ತೊರೆಯಲಿದ್ದು, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಎಂಬುದು ಕನಸಿನ ಮಾತಾಗುತ್ತದೆ ಎಂದು ಶಿವಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.