ಚಾಮರಾಜನಗರ:ಆಸ್ಪತ್ರೆಗೆ ಹೋಗಬೇಕಾದರೆ ಡೋಲಿ, ಪಡಿತರ ತರಬೇಕಾದರೆ ಹೆಗಲೇ ಗತಿ ಎಂಬ ಪರಿಸ್ಥಿತಿ ಇದ್ದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಜನರಿಗೆ ಅರಣ್ಯ ಇಲಾಖೆ ವತಿಯಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಏಡುಕುಂಡಲು ಅವರ ವಿಶೇಷ ಪ್ರಯತ್ನದಿಂದಾಗಿ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿರುವ ಕುಗ್ರಾಮಗಳ ನಿವಾಸಿಗಳಿಗೆ ವಾಹನ ಸೌಕರ್ಯವನ್ನು ಒದಗಿಸಲಾಗಿದೆ.
ಏನಿದು ಜನ ವನ ಸಾರಿಗೆ :ಮಲೆಮಹದೇಶ್ವರ ವನ್ಯಧಾಮದ ಮಹದೇಶ್ವರಬೆಟ್ಟ ಮತ್ತು ಹನೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ರಸ್ತೆ ಮತ್ತಿತರ ಮೂಲ ಸೌಲಭ್ಯಗಳ ಕೊರತೆ ಇರುವ ಗ್ರಾಮಗಳಿಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ವತಿಯಿಂದ ಜನವನ ಸೇತುವೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅರಣ್ಯದೊಳಗಿನ ಗ್ರಾಮಗಳ ಜನರಿಗೆ ಆರೋಗ್ಯದ ತುರ್ತು ಸಂದರ್ಭಗಳಲ್ಲಿ, ಮಕ್ಕಳು ಶಾಲೆಗೆ ಹೋಗಿ ಬರಲು, ಜನರು ಪಡಿತರ ತರಲು ಸೇರಿದಂತೆ ಇತರೆ ಹಲವು ಉದ್ದೇಶಗಳಿಗಾಗಿ ದಿನದ 24 ಗಂಟೆಯೂ ಈ ವಾಹನಗಳು ಸೇವೆ ನೀಡಲಿವೆ.
ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿರುವ ಕುಗ್ರಾಮಗಳ ನಿವಾಸಿಗಳಿಗೆ ವಾಹನಸೌಕರ್ಯವನ್ನು ಒದಗಿಸಲಾಗಿದೆ. ಒಟ್ಟು ನಾಲ್ಕು ವಾಹನಗಳಿದ್ದು, ವಿವಿಧ ನಾಲ್ಕು ಮಾರ್ಗಗಳಲ್ಲಿ ಸಂಚಾರ ನಡೆಸಲಿದೆ. ಮೊದಲನೇ ಮಾರ್ಗವು ಮೆದಗನಾಣೆ, ಮಲೆಮಹದೇಶ್ವರಬೆಟ್ಟ, ತುಳಸಿಕೆರೆ, ಇಂಡಿಗನತ್ತ, ಎರಡನೇ ಮಾರ್ಗವು ಪಡಿಸಲನತ್ತ, ಪಾಲಾರ್, ಮಲೆಮಹದೇಶ್ವರಬೆಟ್ಟ, ಮೂರನೇ ಮಾರ್ಗ ಕೊಕ್ಕಬೆರೆ, ತೋಕೆರೆ, ದೊಡ್ಡಾಣೆ, ಮಲೆಮಹದೇಶ್ವರಬೆಟ್ಟ, ನಾಲ್ಕನೇ ಮಾರ್ಗ ಪಚ್ಚೆದೊಡ್ಡಿ, ಕಾಂಚಳ್ಳಿ, ಅಜ್ಜೀಪುರ ಭಾಗಗಳಲ್ಲಿ ವಾಹನಗಳು ಸಂಚರಿಸಲಿವೆ. ಕಡಿದಾದ ರಸ್ತೆಗಳಲ್ಲೂ ಸಂಚರಿಸುವ ಸಾಮರ್ಥ್ಯವಿರುವ ಫೋರ್ಸ್ ಕಂಪನಿಯ ಗೂರ್ಖಾ ವಾಹನಗಳು ಇದಾಗಿದ್ದು, ಮಲೆ ಮಹದೇಶ್ವರ ಬೆಟ್ಟದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ ಸಂಚಾರಕ್ಕೆ ಚಾಲನೆ ನೀಡಲಾಯಿತು. ದಿನದ 24 ಗಂಟೆಗಳ ಕಾಲ ವಾರದ ಏಳು ದಿನಗಳೂ ಈ ವಾಹನಗಳ ಸೇವೆ ಲಭ್ಯ ಇರಲಿದೆ.
ಜಿಲ್ಲಾಡಳಿತವು ವಾಹನಗಳ ಖರೀದಿಗಾಗಿ ಸುಮಾರು ₹ 55 ಲಕ್ಷ ವೆಚ್ಚ ಮಾಡಿದೆ. ಅರಣ್ಯ ಇಲಾಖೆಯ ನಿಯಂತ್ರಣದಲ್ಲಿ ವಾಹನಗಳು ಸಂಚಾರ ನಡೆಸಲಿವೆ. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಾಗೂ ಶಾಲಾ ಮಕ್ಕಳನ್ನು ಉಚಿತವಾಗಿ ಕರೆದೊಯ್ಯಲಾಗುತ್ತಿದ್ದು, ಉಳಿದ ಸಂದರ್ಭಗಳಲ್ಲಿ ಪ್ರಯಾಣಿಕರು ನಿಗದಿತ ದರವನ್ನು ಪಾವತಿಬೇಕು. ಈ ಮೂಲಕ ಸಂಗ್ರಹವಾಗುವ ಹಣದಲ್ಲಿ ವಾಹನಕ್ಕೆ ಇಂಧನ ಖರೀದಿಸಲಾಗುವುದು ಎಂದು ಡಿಸಿಎಫ್ ಏಡುಕುಂಡಲು ತಿಳಿಸಿದ್ದಾರೆ.
ಓದಿ :ಕಾಫಿನಾಡಲ್ಲಿ ಮಡ್ ರೇಸ್.. ಜೀಪ್ಗಳ ಆರ್ಭಟ ಎಂಜಾಯ್ ಮಾಡಿದ ಜನ