ಚಾಮರಾಜನಗರ:ಎಸ್ಎಸ್ಎಲ್ಸಿಯಲ್ಲಿ ಮಕ್ಕಳ ಫಲಿತಾಂಶ ಕಡಿಮೆಯಾಗುತ್ತಿದೆ ಮತ್ತು ಪರೀಕ್ಷಾ ಭಯ ಹೆಚ್ಚಾಗುತ್ತಿರುವುದರಿಂದ 6 ಹಾಗೂ 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಚಿಂತಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಎಸ್ಎಸ್ಎಲ್ಸಿ ಪರೀಕ್ಷಾ ಭಯ ಹೋಗಲಾಡಿಸಲು ವಿಧಾನಪರಿಷತ್ ಸದಸ್ಯರು, ಕೆಲ ಶಿಕ್ಷಣ ತಜ್ಞರು 6 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಬೇಕೆಂದು ಸಲಹೆ ನೀಡಿದ್ದು, ಈ ಕುರಿತು ಚಿಂತಿಸಲಾಗಿದೆ ಎಂದರು.
6 ಮತ್ತು 8 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಕುರಿತು ಚಿಂತನೆ.. ಫಲಿತಾಂಶದ ಆಧಾರದ ಮೇಲೆ ಶಿಕ್ಷಕರಿಗೆ ಹೆಚ್ಚುವರಿ ಹಣ ನೀಡುವ ಪದ್ಧತಿಯಿಂದಾಗಿ ಹಲವು ಶಾಲೆಗಳಲ್ಲಿ ಸಾಮೂಹಿಕ ನಕಲು ಮಾಡಿಸುವುದು ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.ಫಲಿತಾಂಶದ ಆಧಾರದ ಮೇಲೆ ಸವಲತ್ತು ಕೊಡುವುದನ್ನು ನಿಲ್ಲಿಸಬೇಕು ಎಂಬ ಸಲಹೆಯೂ ಬಂದಿದೆ. ಈ ಕುರಿತು ಇಲಾಖೆ ಪರಿಶೀಲಿಸುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಶಾಲೆಗೆ ಭೇಟಿ ನೀಡಿದ ವೇಳೆ 6ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬೇಕೆ ಸಚಿವರ ಪ್ರಶ್ನೆಗೆ ಹಲವು ಮಕ್ಕಳು ಕೈ ಎತ್ತಿ ಸಹಮತ ವ್ಯಕ್ತಪಡಿಸಿದರು. ಬ್ಯಾಡಮೂಡ್ಲು ಗ್ರಾಮದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆ, ಉತ್ತಮ ರಸ್ತೆ, ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಡಾ. ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣ ಅಭಿವೃದ್ಧಿ, ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಪರಿಶೀಲಿಸಿ ಮಾಹಿತಿ ಪಡೆದರು. ನಂತರ ಕೊಳದ ಗಣಪತಿ ದೇಗುಲಕ್ಕೆ ಭೇಟಿಯಿತ್ತು ಪೂಜೆ ಸಲ್ಲಿಸಿ ದೊಡ್ಡರಸಿನ ಕೊಳ ವೀಕ್ಷಿಸಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಮತ್ತು ನಿರಂಜನಕುಮಾರ್, ಜಿಲ್ಲಾಧಿಕಾರಿ ಬಿ ಬಿ ಕಾವೇರಿ, ಪೊಲೀಸ್ ವರಿಷ್ಠಾಧಿಕಾರಿ ಹೆಚ್ ಡಿ ಆನಂದಕುಮಾರ್ ಇನ್ನಿತರರಿದ್ದರು.