ಚಾಮರಾಜನಗರ: ಮುಳ್ಳು ಹಂದಿಯ ಮುಳ್ಳುಗಳಿಂದ ಗಾಯಗೊಂಡಿದ್ದ ಹುಲಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವಲಯದ ಗಂಡತ್ತೂರು ಗಸ್ತಿನಲ್ಲಿ ನಡೆದಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ನಡೆಸುವಾಗ ಸುಮಾರು 6 ವರ್ಷ ವಯಸ್ಸಿನ ಗಂಡು ಹುಲಿ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ಬೆಳಕಿಗೆ ಬಂದಿದೆ. ಹುಲಿ ದೇಹ ಪರಿಶೀಲನೆ ನಡೆಸಿದಾಗ ಮುಳ್ಳುಹಂದಿ ಭೇಟೆಯಾಡುವಾಗ ಹುಲಿಯ ಮುಂಗಾಲಿಗೆ ಮುಳ್ಳು ಚುಚ್ಚಿಕೊಂಡಿರುವುದು ಕಂಡು ಬಂದಿದೆ.
ಹುಲಿಯ ಮುಂಗಾಲಿಗೆ ಗಾಯಗೊಂಡ ಹಿನ್ನೆಲೆ ಭೇಟೆಯಾಡಲು ಆನೆತಡೆ ಕಂದಕದ ಪೊದೆಯಲ್ಲಿ ಪ್ರಯತ್ನಿಸುವಾಗ ಉರುಳಿಗೆ ಸಿಲುಕಿ ಒದ್ದಾಡಿ ಮೆದುಳಿನಲ್ಲಿ ರಕ್ತಸ್ರಾವವಾಗಿ ಸಾವಿಗೀಡಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಳ್ಳುಹಂದಿಯಿಂದ ಗಾಯಗೊಂಡಿದ್ದ ಹುಲಿ ಉರುಳಿಗೆ ಸಿಲುಕಿ ಸಾವು ಹುಲಿ ಸಾವಿಗೀಡಾದ ಸ್ಥಳಕ್ಕೆ ಬಂಡೀಪುರ ಅರಣ್ಯ ಇಲಾಖೆಯ ಪಶು ವೈದ್ಯ ಡಾ.ವಾಸೀಮ್ ಮಿರ್ಜಾ ಭೇಟಿ ನೀಡಿ ಹುಲಿ ಶವ ಪರೀಕ್ಷೆ ನಡೆಸಿದ್ದಾರೆ. ಜತೆಗೆ ಅರಣ್ಯ ಇಲಾಖೆಯ ಶ್ವಾನ ರಾಣಾ ಬರಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎಸ್‍ಒಪಿ ಪ್ರಕಾರ ಹುಲಿ ಅಂತ್ಯಸಂಸ್ಕಾರ ನೆರವೇರಿದೆ ಎಂದು ತಿಳಿದು ಬಂದಿದೆ.