ಚಾಮರಾಜನಗರ: ಮಧ್ಯರಾತ್ರಿ ಕಾಡಿನೊಳಗೆ ನುಸುಳಿ ಬೇಟೆಗೆ ಹೊಂಚು ಹಾಕುತ್ತಿದ್ದ ಮೂವರು ಬಂದೂಕುಧಾರಿಗಳನ್ನು ಕಾವೇರಿ ವನ್ಯಜೀವಿಧಾಮದ ಸಿಬ್ಬಂದಿ ಬಂಧಿಸಿದ್ದಾರೆ.
ಮಧ್ಯರಾತ್ರಿ ಕಾಡಿನಲ್ಲಿ ಬೇಟೆಗೆ ಹೊಂಚು: ಮೂವರು ಬಂದೂಕುಧಾರಿಗಳ ಬಂಧನ - Chamarajanagara crime news
ಮಧ್ಯರಾತ್ರಿ ಕಾಡಿಗೆ ಲಗ್ಗೆ ಇಟ್ಟಿದ್ದಲ್ಲದೇ ಪ್ರಾಣಿಗಳ ಬೇಟೆಗೆ ಹೊಂಚು ಹಾಕಿ ಕುಳಿತಿದ್ದ ಮೂವರು ಬಂದೂಕುಧಾರಿಗಳನ್ನು ಬಂಧಿಸಲಾಗಿದೆ. ಅವರಿಂದ ದ್ವಿಚಕ್ರ ವಾಹನ ಸೇರಿದಂತೆ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹನೂರು ತಾಲೂಕಿನ ಗೋಪಿನಾಥಂ ಬಳಿಯ ಆತೂರು ಗ್ರಾಮದ ಆಯನ್, ಮಾರಿಮುತ್ತು ಹಾಗೂ ಶಿವಕುಮಾರ್ ಬಂಧಿತ ಆರೋಪಿಗಳು. ಬುಧವಾರ ರಾತ್ರಿ 11.45 ಕ್ಕೆ ಪುಂಗುಂ ಗಸ್ತಿನ ಅರಣ್ಯ ರಕ್ಷಕ ಚಂದ್ರಶೇಖರ್ ಕುಂಬಾರ್ ಹಾಗೂ ಗುಂಡಪಟ್ಟಿ ಕಳ್ಳಬೇಟೆ ತಡೆ ಶಿಬಿರದ ಕಾವಲುಗಾರರು ಗಸ್ತು ಮಾಡುವಾಗ ಗೋಪಿನಾಥಂ ಅರಣ್ಯ ಪ್ರದೇಶ ವ್ಯಾಪ್ತಿಯ ಮೇಟುಗಲು ಅರಣ್ಯ ಪ್ರದೇಶದಲ್ಲಿ 3 ಜನ ಬಂದೂಕುನೊಂದಿಗೆ ಅಕ್ರಮವಾಗಿ ಪ್ರವೇಶಿಸಿ ಬೇಟೆ ಮಾಡಲು ಹೊಂಚು ಹಾಕುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ 2 ನಾಡ ಬಂದೂಕು, ಒಂದು ದ್ವಿಚಕ್ರ ವಾಹನ, ತಲೆ ಬ್ಯಾಟರಿ, 2 ಚಾಕು, ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಇವರುಗಳು ಜಿಂಕೆ ಬೇಟೆಯಾಡಿರುವುದಾಗಿ ತಿಳಿದು ಬಂದಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.