ಕರ್ನಾಟಕ

karnataka

ETV Bharat / state

ಅನಗತ್ಯ ಓಡಾಡಲ್ಲ, ಅಕ್ಕಪಕ್ಕದ ಮನೆಗೆ ಹೋಗಲ್ಲ... ಕಾಡಿನ ಮಕ್ಕಳಿಂದ ಲಾಕ್​ಡೌನ್​ ಪಾಠ!

ಓದಿದವರು, ಟಿವಿ ಮುಂದೆ ದಿನದ 24 ಗಂಟೆ ಕೂರುವವರು, ಯುವಕರು, ಕಾಲೇಜು ವಿದ್ಯಾರ್ಥಿಗಳೇ ಲಾಕ್​ಡೌನ್ ಎಂದು ಗೊತ್ತಿದ್ದರೂ ಅನಗತ್ಯವಾಗಿ ಸಂಚರಿಸುತ್ತಿದ್ದಾರೆ. ಮುಖಗವಸು ಹಾಕದೇ ತಿರುಗಾಡುತ್ತಿದ್ದಾರೆ. ಆದರೆ, ಓದು-ಬರಹ ಬರದ ಕಾಡಿನ ಮಕ್ಕಳು ಲಾಕ್​ಡೌನ್ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.

The Adivasis of the Kanneri colony Lockdown
ಕಾಡಿನ ಮಕ್ಕಳಿಂದ ಲಾಕ್​ಡೌನ್​ ಪಾಠ

By

Published : Apr 15, 2020, 1:04 PM IST

Updated : Apr 15, 2020, 3:58 PM IST

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಕನ್ನೇರಿ ಕಾಲೋನಿಯ ಆದಿವಾಸಿಗಳು ಬೆಳಗ್ಗೆ ಒಮ್ಮೆ ನೀರು ತರಲು ಮನೆಯಿಂದ ಹೊರಗಡೆ ಬಂದರೆ ಇನ್ನು ಸಂಜೆಯೊಮ್ಮೆ ನೀರು ತರಲಷ್ಟೇ ಹೊರಬರುವುದಂತೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ನೀರು ಹಿಡಿಯುತ್ತೇವೆ. ಮೊದಲಿನಂತೆ ಅಕ್ಕಪಕ್ಕದ ಮನೆಗೆ ಹೋಗಿ ಕುಳಿತು ಹರಟುವುದನ್ನು ನಿಲ್ಲಿಸಿದ್ದೇವೆ ಎಂದು ಗಿರಿಜನ ಮಹಿಳೆ ಸಿದ್ದಮ್ಮ ಹೇಳಿದ್ದಾರೆ.

ಕಾಡಿನ ಮಕ್ಕಳಿಂದ ಲಾಕ್​ಡೌನ್​ ಪಾಠ

ನಮ್ಮ ಪೋಡಿಗೂ ಯಾರನ್ನು ಸೇರಿಸುತ್ತಿಲ್ಲ. ನಾವು ಹೊರಗಡೆ ಹೋಗುತ್ತಿಲ್ಲ. ಮೊದಲಿನ ರೀತಿ ಎಲ್ಲರೂ ಜೊತೆಯಾಗಿ ಕುಳಿತು ಹರಟುವುದಿಲ್ಲ. ಮನೆಯಿಂದ ಹೊರ ಬಂದ ಕೂಡಲೇ ಸೀರೆ, ಕರ್ಚೀಫಿನ ಮೂಲಕ ಮುಖಗವಸು ಮಾಡಿಕೊಳ್ಳುತ್ತೇವೆ. ನಮಗೂ ಕಾಯಿಲೆ ಭಯವಿದೆ. ಸರ್ಕಾರ ನೀಡುವ ಪಡಿತರ, ತರಕಾರಿ ತಲುಪಿದ್ದು‌, ನಾವೆಲ್ಲೂ ಹೊರ ಹೋಗುತ್ತಿಲ್ಲ. ಮನೆಯ ಹೊರಗಡೆಯೂ ಕೂರುತ್ತಿಲ್ಲ ಎಂದರು.

ಸುಮಾರು 60 ವರ್ಷ ದಾಟಿರುವ ಈರಮ್ಮ ಎಂಬವರು, ನಾವೆಲ್ಲೂ ಹೋಗುತ್ತಿಲ್ಲ. ನಮ್ಮ ಮಕ್ಕಳನ್ನೂ ಎಲ್ಲಿಗೂ ಕಳುಹಿಸುತ್ತಿಲ್ಲ.‌ ಮಕ್ಕಳಿಗೆ ಕೈ ತೊಳೆಸಿ ಊಟ ಮಾಡಿಸುತ್ತೇವೆ. ನಾವೂ ಹಲವು ಬಾರಿ ಕೈ ತೊಳೆಯುತ್ತೇವೆ. ಬಸ್ ಬಂದರೆ ಬೇರೆ ಕಡೆಯಿಂದ ಯಾರಾದರೂ ಬರಬಹುದು. ಪಾತ್ರೆ-ಪಗಡೆ ಮಾರುವವರು ಬಂದರೂ ನಾವು ಸೇರಿಸುವುದಿಲ್ಲ ಎಂದರು.

ಬಾಗಿಲನ್ನು ಬಂದ್ ಮಾಡಿ ಒಳಗೆ ಮನೆಗೆಲಸ, ಟಿವಿ ನೋಡುವುದು, ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗುವ ಆದಿವಾಸಿಗಳು‌ ನಿಜಾರ್ಥದಲ್ಲಿ ಲಾಕ್​ಡೌನ್ ಎಂದರೇನು ಎಂಬುದನ್ನು ತೋರಿಸಿದ್ದಾರೆ. ಆದಿವಾಸಿ ಪುರುಷರು ಕೂಡ ಮನೆ ಬಿಟ್ಟು ಕದಲದೇ ಅನಗತ್ಯ ಓಡಾಟ‌‌‌ ನಿಲ್ಲಿಸಿದ್ದಾರೆ. ಮಹಿಳೆಯರು ನೀರು ತರಲಾದರೂ ಆಚೆಗೆ ಬಂದರೆ, ಪುರುಷರು ಮನೆ ಬಿಟ್ಟು ಹೊರಗಡೆಯೇ ಹೋಗದೆ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.

Last Updated : Apr 15, 2020, 3:58 PM IST

ABOUT THE AUTHOR

...view details