ಚಾಮರಾಜನಗರ: ಭೀಮನ ಅಮಾವಾಸ್ಯೆ ಪ್ರಯುಕ್ತ ದೇವಾಲಯಕ್ಕೆ ತೆರಳುತ್ತಿದ್ದ ಟಾಟಾ ಏಸ್ ಪಲ್ಟಿಯಾಗಿ ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಸಮೀಪ ಇಂದು ಮಧ್ಯಾಹ್ನ ನಡೆದಿದೆ. ಅಂಕಹಳ್ಳಿ ಗ್ರಾಮದ ನಿರ್ಮಲಾ, ಬೆಳ್ಳಯ್ಯ, ಬೇಬಿ(11), ಮಧನ್(9), ಗಂಗಮ್ಮ, ಪವಿತ್ರಾ, ಸೋಮಣ್ಣ ಸೇರಿದಂತೆ 16 ಮಂದಿಗೆ ತಲೆ, ಮುಖಕ್ಕೆ ತೀವ್ರ ಪೆಟ್ಟು ಬಿದ್ದಿದ್ದು ಚಾಮರಾಜನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದವರಿಗೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಲಾಗುತ್ತಿದೆ.
ಭೀಮನ ಅಮಾವಾಸ್ಯೆ ಪ್ರಯುಕ್ತ ಕೋಡಹಳ್ಳಿ ಮಹದೇಶ್ವರ ದೇಗುಲಕ್ಕೆ 20ಕ್ಕೂ ಹೆಚ್ಚು ಟಾಟಾ ಏಸ್ ವಾಹನದಲ್ಲಿ ಬರುತ್ತಿದ್ದ ವೇಳೆ, ಶಿವಪುರ ಸಮೀಪ ವಾಹನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಈ ಅನಾಹುತ ಘಟಿಸಿದೆ ಎನ್ನಲಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಎರಡೂ ಪ್ರತ್ಯೇಕ ಅಪಘಾತ.. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ.. ಮಹಿಳೆ ಸಾವು, ಇಬ್ಬರಿಗೆ ಗಂಭೀರ ಗಾಯ
ಶಾಲಾ ವಾಹನ ಪಲ್ಟಿ:ಚಾಲಕನ ನಿರ್ಲಕ್ಷ್ಯದಿಂದ ಶಾಲಾ ವಾಹನ ಪಲ್ಟಿ ಹೊಡೆದು, ಮಕ್ಕಳು ಅದೃಷ್ಡವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದ ಬಳಿ ಇತ್ತೀಚೆಗೆ ನಡೆದಿತ್ತು. ಟಾಟಾ ಮ್ಯಾಜಿಕ್ ವಾಹನದಲ್ಲಿ 35 ಮಕ್ಕಳನ್ನು ತುಂಬಿಕೊಂಡು ಚಾಲಕ ಹೋಗುತ್ತಿದ್ದ ಅವಘಡ ನಡೆದಿತ್ತು. ಬೈಲಹೊಂಗಲ ಸಮೀಪದ ಮರಕುಂಬಿಯಲ್ಲಿರುವ ಗಣಾಚಾರಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ವಾಹನ ಇದಾಗಿತ್ತು. ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ತುಂಬಿಕೊಂಡು ಹೋಗಿರುವುದು ಕೂಡ ಶಾಲಾ ನಿರ್ಲಕ್ಷ್ಯ ಮತ್ತು ಚಾಲಕನ ಬೇಜಬ್ದಾರಿಯೇ ಅಪಘಾತಕ್ಕೆ ಕಾರಣ ಎನ್ನಲಾಗಿತ್ತು.