ಚಾಮರಾಜನಗರ: ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವದಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಭಾರತ ಗಣನೀಯ ಸಾಧನೆ ಮಾಡುತ್ತಿದೆ. 7 ವರ್ಷದಲ್ಲಿ ದೇಶಾದ್ಯಂತ 152 ಮೆಡಿಕಲ್ ಕಾಲೇಜು ತಲೆ ಎತ್ತಿವೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಸಿಮ್ಸ್ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಿದ್ದರು. ಈ ವೇಳೆ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, 30 ಸಾವಿರ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದು ಹೊರಹೊಮ್ಮುತ್ತಿದ್ದಾರೆ. ಶೇ.50 ರಷ್ಟು ವೈದ್ಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು.
ಮೋದಿ ಅವರ ದಿಟ್ಟ ನಾಯಕತ್ವದಿಂದ ಕೊರೊನಾ ಮಹಾಮಾರಿ ತಡೆಗಟ್ಟಲು ಸಾಧ್ಯವಾಗಿದೆ. ಭೀಕರ ಸಾಂಕ್ರಾಮಿಕ ರೋಗ ತಡೆಗೆ ಪ್ರಧಾನಿಗಳು ಅವಿರತವಾಗಿ ಶ್ರಮಿಸಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಅಭೂತಪೂರ್ವದಂತೆ ಕೇಂದ್ರ ಸರ್ಕಾರ ಅನುದಾನ ಕೊಡುತ್ತಿದೆ. ವಿವಿಧತೆಯಲ್ಲಿ ಏಕತೆ ಇರುವ ಭಾರತದಲ್ಲಿ ಕೊರೊನಾ ಹೋರಾಟವನ್ನು ಒಗ್ಗಟ್ಟಾಗಿ ಎದುರಿಸಿ ಮಹಾಮಾರಿ ವಿರಮಿಸುವಂತೆ ಮಾಡಿದ್ದೇವೆ ಎಂದು ತಿಳಿಸಿದರು.
ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಮತ್ತು ಹಿಂದೆ ಬಿಎಸ್ವೈ ಮುಖ್ಯಮಂತ್ರಿಯಾಗಿದ್ದಾಗ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರಶಸ್ತಿಗೆ ರಾಜ್ಯ ಆಯ್ಕೆಯಾಗಿದೆ. ಇದಕ್ಕೆ ಕಾರಣ ಫ್ರಂಟ್ ಲೈನ್ ವಾರಿಯರ್ಸ್, ಮೆಡಿಕಲ್ ವಿದ್ಯಾರ್ಥಿಗಳು. ಅವರ ಕಾರ್ಯ ಸ್ಮರಣೀಯ ಎಂದರು.