ಚಾಮರಾಜನಗರ:ಗರ್ಭಿಣಿಯರಿಗೆ ಕೊರೊನಾ ಬಂತೆಂದರೆ ತಾಯಿ-ಮಗು ಇಬ್ಬರ ಜೀವ ಕಾಪಾಡಬೇಕಾದ ದೊಡ್ಡ ಸವಾಲು ಗಡಿಜಿಲ್ಲೆ ವೈದ್ಯರು ಯಶಸ್ವಿಯಾಗಿ ಎದುರಿಸುತ್ತಿದ್ದಾರೆ. ಕೊರೊನಾ ಆತಂಕ ಮಧ್ಯೆಯೂ 30 ಸೋಂಕಿತ ಮಹಿಳೆಯರಿಗೆ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.
ಸತತ 110 ದಿನ ಹಸಿರು ವಲಯದಲ್ಲೇ ಇದ್ದ ಚಾಮರಾಜನಗರಕ್ಕೆ ಸೋಂಕು ಕಾಲಿಟ್ಟ ಬಳಿಕ 50 ಕ್ಕೂ ಹೆಚ್ಚು ಗರ್ಭಿಣಿಯರಿಗೆ ವೈರಸ್ ವಕ್ಕರಿಸಿತ್ತು. ಇವರಲ್ಲಿ 30 ಮಂದಿಗೆ ಜಿಲ್ಲಾಸ್ಪತ್ರೆಯ ವೈದ್ಯರು ಯಶಸ್ವಿ ಹೆರಿಗೆ ಮಾಡಿಸಿದ್ದಾರೆ. ಅಂದಹಾಗೆ, ಕೋವಿಡ್ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ವಾರ್ಡ್ ಹಾಗೂ ಬಾಣಂತಿಯರಿಗೆ ಬೇಬಿ ಕೇರ್ ಎಂಬ ಮತ್ತೊಂದು ವಿಶೇಷ ವಾರ್ಡ್ ಇದೆ ಎಂದು 'ಈಟಿವಿ ಭಾರತ'ಕ್ಕೆ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ.
30 ಹೆರಿಗೆಯಲ್ಲಿ 16 ಸಿಸೇರಿಯನ್ ಹಾಗೂ 14 ನಾರ್ಮಲ್ ಡೆಲಿವರಿಯಾಗಿದ್ದು, 2 ಶಿಶುಗಳಿಗೆ ಕೊರೊನಾ ತಗುಲಿ ಗುಣಮುಖವಾಗಿವೆ. ಸೋಂಕಿತರಿಗೆಂದೇ ಪ್ರತ್ಯೇಕ ಆಪರೇಷನ್ ಥಿಯೇಟರ್ ಕೂಡ ರೂಪಿಸಿದ್ದು, ಹೆರಿಗೆಗೆ ಬಳಸಿರುವುದಲ್ಲದೆ ಓರ್ವ ವ್ಯಕ್ತಿಗೆ ಅಪೆಂಡಿಕ್ಸ್ ಆಪರೇಷನ್ ಕೂಡ ಮಾಡಿದ್ದೇವೆ. ಪಿಪಿಐ ಕಿಟ್ ಧರಿಸಿ ಶಸ್ತ್ರಚಿಕಿತ್ಸೆ ಮಾಡುವುದು, ಹೆರಿಗೆ ಮಾಡಿಸುವುದು ಸವಾಲಿನ ಕೆಲಸವಾಗಿದ್ದು ಅದನ್ನು ಯಶಸ್ವಿಯಾಗಿ ನೆರವೇರಿಸಿದ್ದೇವೆ. ಇನ್ನೂ 26 ಗರ್ಭಿಣಿಯರು ಕೋವಿಡ್ ಆಸ್ಪತ್ರೆಯಲ್ಲಿದ್ದು, ಅವರ ಮೇಲೆ ಮೇಲೆ ವಿಶೇಷ ನಿಗಾ ಇಟ್ಟಿರುವುದಾಗಿ ಡಾ. ಕೃಷ್ಣ ಪ್ರಸಾದ್ ತಿಳಿಸಿದರು.
ಮಾರ್ಗಸೂಚಿ ಪ್ರಕಾರ ಗರ್ಭಿಣಿಯರು ಹೆರಿಗೆ ದಿನಾಂಕದ 14 ದಿನಗಳಿಗೂ ಮುನ್ನ ಕೋವಿಡ್ ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದ್ದು, ಒಂದು ವೇಳೆ ಸೋಂಕು ದೃಢಪಟ್ಟರೆ ಕೋವಿಡ್ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತೇವೆ. ಸಾಮಾನ್ಯವಾಗಿ ಮಾರ್ಚ್ ನಿಂದ ಜುಲೈವರೆಗೆ ಸರಾಸರಿ 280-320 ರಷ್ಟು ಕೋವಿಡೇತರ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಂದು ಪ್ರಕರಣದಲ್ಲಿ ಹುಟ್ಟಿದ ಮಗುವಿಗೆ ಕೊರೊನಾ ಪಾಸಿಟಿವ್ ಬಂದು ಬಳಿಕ ಐದೇ ದಿನಕ್ಕೆ ನೆಗೆಟಿಬ್ ಬಂದಿರುವ ಘಟನೆಯೂ ಜಿಲ್ಲೆಯಲ್ಲಿ ನಡೆದಿದೆ. ಕೊರೊನಾ ಕಾಲದಲ್ಲಿ ವೈದ್ಯರು ಹೆರಿಗೆ ಮಾಡಿಸುವ ವಿಚಾರದಲ್ಲಿ ಹೊಸದೊಂದು ಸವಾಲನ್ನು ಯಶಸ್ವಿಯಾಗಿ ಎದುರಿಸುತ್ತಿದ್ದಾರೆ.