ಚಾಮರಾಜನಗರ ಜಿಲ್ಲೆಯಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ಶ್ರೀವಿದ್ಯಾಗಣಪತಿ ಮಂಡಳಿಯಿಂದ ಸುದರ್ಶನಚಕ್ರ ಗಣಪತಿ ಪ್ರತಿಷ್ಠಾಪನೆ ಚಾಮರಾಜನಗರ: ಜಿಲ್ಲೆಯಾದ್ಯಂತ ಗೌರಿ- ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ಶ್ರೀವಿದ್ಯಾಗಣಪತಿ ಮಂಡಳಿ ವತಿಯಿಂದ ಸುದರ್ಶನಚಕ್ರ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಗಣಪತಿಯನ್ನು ಮಧ್ಯಾಹ್ನ 12.30ಕ್ಕೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಶ್ರೀವಿದ್ಯಾಗಣಪತಿ ಮಂಡಳಿಯ ಅಧ್ಯಕ್ಷ ಕೃಷ್ಣಕುಮಾರ್ ಮಾತನಾಡಿ, ಗೌರಿ-ಗಣೇಶ ಹಬ್ಬವನ್ನು ನಾಡಿನ ಸಂಸ್ಕೃತಿ, ಭಾವೈಕ್ಯತೆ ಪ್ರತೀಕವಾಗಿ ಆಚರಿಸಲಾಗುತ್ತಿದೆ. ಶ್ರೀವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯು ನಗರದ ಎಲ್ಲ ಕೋಮಿನ ಮುಖಂಡರ ಸಹಕಾರದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಈ ವರ್ಷ ಸುದರ್ಶನಚಕ್ರ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅ. 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅ. 19 ರಂದು ನಗರದ ನಾನಾ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ನಗರದ ದೊಡ್ಡರಸನಕೊಳದಲ್ಲಿ ಚಿತ್ತಾಕರ್ಷಕ ಬಾಣ ಬಿರುಸುಗಳೊಂದಿಗೆ ವಿಸರ್ಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಹಿಂದೆ ಗಣಪತಿ ನಿಮಜ್ಜನ ಸಂಬಂಧ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಜಯ ಕಂಡಿತ್ತು. ಮೆರವಣಿಗೆಯಲ್ಲಿ ಜನರಿಗಿಂತ ಪೊಲೀಸರೇ ಅತ್ಯಧಿಕ ಸಂಖ್ಯೆಯಲ್ಲಿ ಇರುವುದರಿಂದ ಪೊಲೀಸ್ ಗಣಪತಿ ಎಂಥಲೂ ಇದು ಪ್ರಖ್ಯಾತಿ ಪಡೆದಿದೆ.
ರೂಟ್ ಮಾರ್ಚ್: ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇಂದು ಚಾಮರಾಜನಗರದಲ್ಲಿ ಎಸ್ಪಿ ಪದ್ಮಿನಿ ಸಾಹು ನೇತೃತ್ವದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ಚಾಮರಾಜೇಶ್ವರ ದೇಗುಲದಿಂದ ಚಾಮರಾಜನಗರ ಪಟ್ಟಣ, ಪೂರ್ವ, ಗ್ರಾಮಾಂತರಗಳಲ್ಲಿ ಮೀಸಲು ಹಾಗೂ ಟ್ರಾಫಿಕ್ ಠಾಣೆ ಪೊಲೀಸರು ಪಥ ಸಂಚಲನ ನಡೆಸಿದರು. ಇನ್ನು, ರೂಟ್ ಮಾರ್ಚ್ ಬಳಿಕ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸಿರುವ ದೊಡ್ಡ ಗಣಪತಿಗೆ ಪೂಜೆ ಸಲ್ಲಿಸಿದರು.
ಇದನ್ನೂ ಓದಿ:ಕುಟುಂಬ ಸದಸ್ಯರ ಜೊತೆ ಗಣೇಶ ಚತುರ್ಥಿ ಆಚರಿಸಿದ ಬಿಎಸ್ ಯಡಿಯೂರಪ್ಪ
ಹಿಂದೂ ಮಹಾ ಮಂಡಳಿವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ:ಮತ್ತೊಂದೆಡೆ, ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾ ಮಂಡಳಿವತಿಯಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ನಗರದ ಕುಂಬಾರಗುಂಡಿಯ ಗಣೇಶ ಎಂಬವರ ಮನೆಯಿಂದ ಗಣಪತಿ ಮೂರ್ತಿಯನ್ನು ಸರಳವಾದ ಮೆರವಣಿಗೆಯ ಮೂಲಕ ಭೀಮೇಶ್ವರ ದೇವಾಲಯಕ್ಕೆ ತರಲಾಯಿತು. ನಂತರ ದೇವಾಲಯದಲ್ಲಿ ತಂದು ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಹಿಂದೂ ಮಹಾ ಮಂಡಳಿಯ ಸಂಚಾಲಕ ಹಾಗೂ ಶಾಸಕ ಚನ್ನಬಸಪ್ಪ, ಪ್ರತಿ ವರ್ಷದಂತೆ ಈ ವರ್ಷ ಹಿಂದೂ ಮಹಾ ಮಂಡಳದಿಂದ ಗಣೇಶನನ್ನು ಪ್ರತಿಷ್ಠಾಪಿಸಿದ್ದೇವೆ. ಸೆಪ್ಟೆಂಬರ್ 28ರ ನಂತರ ಚತುರ್ಥಿಯಂದು ಗಣೇಶನ ರಾಜಬೀದಿ ಉತ್ಸವ ನಡೆಯಲಿದೆ. ರಾಜಬೀದಿಯಲ್ಲಿ ಗಣೇಶನ ಮೆರವಣಿಗೆ ಶಾಂತಿಯುತವಾಗಿ ಸಾಗಲಿದೆ. ರಾಜಬೀದಿ ಉತ್ಸವದ ಹಿಂದಿನ ದಿನ ಮಹಾ ಮಂಗಳಾರತಿ ನಡೆಯಲಿದ್ದು, ನಂತರ ಪ್ರಸಾದ ವಿನಿಯೋಗ ಜರುಗಲಿದೆ ಎಂದು ಹೇಳಿದರು.