ಕರ್ನಾಟಕ

karnataka

ETV Bharat / state

ಚಾಮರಾಜನಗರ: ಚುಕ್ಕಿ ಚರ್ಮ ರೋಗದಿಂದ ಬಳಲುತ್ತಿರುವ ಮಕ್ಕಳ ಕ್ಷೇಮ ವಿಚಾರಿಸಿದ ಆರೋಗ್ಯ ಸಚಿವರು - ಮಕ್ಕಳ ಆರೋಗ್ಯ ಕ್ಷೇಮ ವಿಚಾರಣೆ

ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಚುಕ್ಕಿ ಚರ್ಮ ರೋಗ ಭಾಧಿತ ಸವಿತಾ ಹಾಗೂ ಭದ್ರಯ್ಯನಹಳ್ಳಿ ಗ್ರಾಮದ ದೀಕ್ಷಿತಾ ಮನೆಗಳಿಗೆ ದಿನೇಶ್ ಗುಂಡೂರಾವ್ ಭೇಟಿ ನೀಡಿ ಸರ್ಕಾರದಿಂದ ಎಲ್ಲ ಸೌಲಭ್ಯ ಒದಗಿಸಲಾಗುವುದು. ಚುಕ್ಕಿ ಚರ್ಮ ರೋಗ 14 ಮಕ್ಕಳಲ್ಲಿ ಕಾಣಿಸಿಕೊಂಡಿದ್ದು, 8 ಮಂದಿ ಅಸುನೀಗಿದ್ದಾರೆ. 6 ಮಂದಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Health Minister Dinesh Gundu Rao spoke to the media.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮದವರೊಂದಿಗೆ ಮಾತನಾಡಿದರು.

By ETV Bharat Karnataka Team

Published : Sep 22, 2023, 5:54 PM IST

Updated : Sep 22, 2023, 8:08 PM IST

ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಚಾಮರಾಜನಗರ: ವಿಚಿತ್ರ ಹಾಗೂ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಹನೂರು ತಾಲೂಕಿನ ಭದ್ರಯ್ಯನಹಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಮಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಭೇಟಿ ನೀಡಿ ಮಕ್ಕಳ ಆರೋಗ್ಯ ಕ್ಷೇಮ‌ ವಿಚಾರಿಸಿದರು.

ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದ ಚುಕ್ಕಿ ಚರ್ಮ ರೋಗ ಭಾಧಿತ ಸವಿತಾ ಹಾಗೂ ಭದ್ರಯ್ಯನಹಳ್ಳಿ ಗ್ರಾಮದ ದೀಕ್ಷಿತಾ ಮನೆಗಳಿಗೆ ದಿನೇಶ್ ಗುಂಡೂರಾವ್ ಭೇಟಿ ನೀಡಿ ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಚುಕ್ಕಿ ಚರ್ಮ ರೋಗ ಅನುವಂಶಿಕವಾಗಿ ಬರುವ ಕಾಯಿಲೆಯಾಗಿದ್ದು 10-14 ವಯೋಮಾನ ದಾಟಿದ ಬಳಿಕ ಈ ವಿಚಿತ್ರ ರೋಗ ಕಾಲಿಡಲಿದೆ. ಬಿಸಿಲಿಗೆ ಹೋಗಲಾಗದ ಪರಿಸ್ಥಿತಿ ಇರಲಿದೆ, ಇದೊಂದು ಮಾರಣಾಂತಿಕವಾಗಿದ್ದು 14 ಮಂದಿ ಮಕ್ಕಳಲ್ಲಿ ಕಾಣಿಸಿಕೊಂಡು 8 ಮಂದಿ ಅಸುನೀಗಿದ್ದಾರೆ. 6 ಮಂದಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸಚಿವರು ಹೇಳಿದರು.

ಕುರಟ್ಟಿ ಹೊಸೂರು ಗ್ರಾಮದಲ್ಲಿ ಸವಿತಾ, ನವೀನ್ ಶೆಟ್ಟಹಳ್ಳಿ ಗ್ರಾಮದಲ್ಲಿ ಹಶಿಕಾ, ಭದ್ರಯ್ಯನಹಳ್ಳಿಯಲ್ಲಿ ದೀಕ್ಷಿತಾ, ನಾಗಾರ್ಜುನ್ ಎಂಬುವರು ಚುಕ್ಕಿ ಚರ್ಮರೋಗದಿಂದ ಬಳಲುತ್ತಿದ್ದು ರಾಜ್ಯದ ಬೇರೆ ಬೇರೆ ಭಾಗದಲ್ಲೂ ಇತ್ತೀಚೆಗೆ ಈ ಕಾಯಿಲೆ ವರದಿಯಾಗುತ್ತಿದ್ದು ರೋಗಕ್ಕೆ ತುತ್ತಾದವರು ಅಂಧರಾಗಿ ಬಳಿಕ ಜೀವವನ್ನೇ ಬಿಟ್ಟಿದ್ದಾರೆ ಎಂದು ಹೇಳಿದರು.

ಸಹಾನುಭೂತಿ ನೆಲೆಯಲ್ಲಿ ಕುಟುಂಬಕ್ಕೆ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಿದ್ದು ಔಷಧಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸರ್ಕಾರವೇ ಭರಿಸಲಿದೆ. ಈ ಜೆನೆಟಿಕ್ ಕಾಯಿಲೆ ಬೆಳಕಿಗೆ ಬಂದ ಬಳಿಕ ಅಂತಾರಾಷ್ಟ್ರೀಯ ಮಟ್ಟದ ವೈದ್ಯರು ಕೂಡ ಈ ಕಾಯಿಲೆ ಬಗ್ಗೆ ಕೇಳುತ್ತಿದ್ದಾರೆ. ಇದನ್ನು ಸಂಪೂರ್ಣ ಗುಣಮುಖ ಮಾಡಲು ಸಾಧ್ಯವಿಲ್ಲ ಆದರೆ ಇದನ್ನು ಬರದಂತೆ ತಡೆಯಬಹುದಾಗಿದೆ, ಈ ರೋಗದ ಬಗ್ಗೆ ತಜ್ಞ ವೈದ್ಯರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸುತ್ತೇನೆ ಎಂದರು.

ಏ‌ನಿದು ಚುಕ್ಕಿ‌ ರೋಗ ?: ಕೈ, ಕಾಲು, ಮುಖದ ಮೇಲೆ ಕಪ್ಪು ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವ ರೋಗಕ್ಕೆ ಚುಕ್ಕಿ ಚರ್ಮರೋಗ ಎಂದು ಕರೆಯಲಾಗುತ್ತದೆ. ಇದು ಒಂದು ಬಾರಿ ಮಕ್ಕಳಿಗೆ ಅಂಟಿಕೊಂಡರೆ ಸಾವು ಖಚಿತ ಎಂಬ ಮಾತಿದೆ. ಈ ರೀತಿ ಮಾರಕ‌ ಕಾಯಿಲೆ ಹನೂರು ತಾಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ ವ್ಯಾಪ್ತಿ ಕಂಡು ಬರುತ್ತಿದೆ. 2015ರಲ್ಲಿ ಇದೇ ಭಾಗದಲ್ಲಿ ಕಾಣಿಸಿಕೊಂಡಿದ್ದ ಈ ಚುಕ್ಕಿ ಚರ್ಮ ರೋಗದಿಂದ ಕೆಲ ಮಕ್ಕಳು ಸಾವನ್ನಪ್ಪಿದ್ದರು. ಸದ್ಯ ಔಷಧಿಯೇ ಇಲ್ಲದ ಈ ಕಾಯಿಲೆಗೆ ಸಣ್ಣ ಸಣ್ಣ ಕಂದಮ್ಮಗಳು ಹೈರಾಣ ಆಗಿದ್ದಾರೆ.

ಮಕ್ಕಳಿಗೆ ಒಂಬತ್ತು ವರ್ಷ ತುಂಬಿದ ನಂತರ ಚರ್ಮದಲ್ಲಿ ಹುಣ್ಣು, ಬಿಳಿ ಮಚ್ಚೆ, ಚರ್ಮ ಕಪ್ಪು ಬಣ್ಣಕ್ಕೆ ತಿರುಗುವುದು, ಕಣ್ಣು ಊದಿಕೊಳ್ಳುವಿಕೆ ಈ ರೀತಿ ನಾನಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸದ್ಯ ಹನೂರು ಸುತ್ತಲಿನ 4ಕ್ಕೂ ಹೆಚ್ಚಿನ ಮಕ್ಕಳಲ್ಲಿ ರೋಗ ಲಕ್ಷಣ ಪತ್ತೆಯಾಗಿದೆ. ಇತ್ತ ವೈದ್ಯರ ಪ್ರಕಾರ ಈ ರೋಗವು ಅನುವಂಶೀಕವಾಗಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಮಕ್ಕಳು ಶಾಲೆಗೆ ಹೋಗಲು ಸಹ ಹಿಂದೇಟು ಹಾಕುವ ಪರಿಸ್ಥಿತಿ ಸಹ ನಿರ್ಮಾಣವಾಗಿದೆ.

ಕಾವೇರಿ ಸಂಕಷ್ಟದ ಸಂಬಂಧ ಕ್ಯಾಬಿನೆಟ್ ಮೀಟಿಂಗ್​ದಲ್ಲಿ ಇಂದು ಚರ್ಚೆ :ಸುಗ್ರೀವಾಜ್ಞೆ ತಂದು ನೀರು ಬಂದ್ ಮಾಡುವ ಕಾಲ ಮಿಂಚಿಹೋಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಗ್ರಿವಾಜ್ಞೆ ತರುವ ಕಾಲವೆಲ್ಲಾ ಮಿಂಚಿಹೋಗಿದೆ. ಕಾನೂನು ಪಾಸ್ ಮಾಡಿದ್ರೂ ಒಂದೇ-ಇಲ್ಲದಿದ್ದರೂ ಒಂದೇ, ಈಗ ನಮ್ಮ ಜನರ ಹಕ್ಕಿಗಾಗಿ ಯಾವ ರೀತಿ ಹೋರಾಟ ಮಾಡಬೇಕೆಂದು ಎಲ್ಲರೂ ಕುಳಿತು ಇಂದು ಚರ್ಚೆ ಮಾಡುತ್ತೇವೆ ಎಂದರು.

ಇಂದು ಸಂಜೆ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು ಕಾವೇರಿ ಸಂಕಷ್ಟದ ಸಂಬಂಧ ಚರ್ಚೆ ಆಗಲಿದೆ, ರಾಜ್ಯದ ರೈತರ ಹಿತವನ್ನು ಕಾಪಾಡುವ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.

ಕಾವೇರಿ ಹಳೇ ಮೈಸೂರು ಭಾಗದ ಜೀವನಾಡಿಯಾಗಿದೆ. ಕೃಷಿ, ನೀರಾವರಿ, ಕುಡಿಯುವ ನೀರಿನ ಮೇಲೆ ಅವಲಂಬಿತರಾಗಿದ್ದೇವೆ.‌ ಕಾವೇರಿ ನೀರು ಇಲ್ಲದಿದ್ದರೇ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಜೀವ ಉಳಿಯಲು ನೀರು ಬೇಕೆ ಬೇಕು, ರಾಜ್ಯದ ಜನರ ಹಿತ ಕಾಯುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದ ಅವರು, ಇದೇ ವೇಳೆ ಇಂಡಿಯಾ ಒಕ್ಕೂಟಕ್ಕಾಗಿ ನೀರನ್ನು ಹರಿಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದರು.

ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕುರಿತಾಗಿ ಸಚಿವರು ಮಾತನಾಡಿ, ನಾವು ಕಳೆದ ಬಾರಿ ಮೈತ್ರಿ ಮಾಡಿಕೊಂಡು ಸಾಕಷ್ಟು ತೊಂದರೆಯಾಯಿತು, ಈ ಬಾರಿ ಯಾವುದೇ ಮೈತ್ರಿಯಿಲ್ಲ, ನಾವು ಖುಷಿಯಾಗಿದ್ದೇವೆ, ಅವರು ಮೈತ್ರಿ ಮಾಡಿಕೊಳ್ಳುತ್ತಿರುವುದು ಒಳ್ಳೆಯದೊ-ಕೆಟ್ಟದೋ ಅವರಿಗೆ ಬಿಟ್ಟಿದ್ದು ನಮಗೆ ಈ ಬಾರಿ ಚುನಾವಣೆಯಲ್ಲಿ ಒಳ್ಳೆಯದಾಗಲಿದೆ ಎಂದರು.

ಇದನ್ನೂಓದಿ:ನಿಫಾ ವೈರಸ್ ಆತಂಕ: ಮಂಗಳೂರಿನಲ್ಲಿ‌ ಕೇರಳ ಗಡಿಭಾಗದ ನಾಲ್ಕು ಜಿಲ್ಲೆಗಳ ಆರೋಗ್ಯಾಧಿಕಾರಿಗಳ ಸಭೆ- ಅ.7ರ ವರೆಗೆ ಮುನ್ನೆಚ್ಚರಿಕೆಗೆ ಸಚಿವ ಸೂಚನೆ

Last Updated : Sep 22, 2023, 8:08 PM IST

ABOUT THE AUTHOR

...view details