ಕರ್ನಾಟಕ

karnataka

ETV Bharat / state

ನಾಳೆಯಿಂದ ಶಾಲಾ - ಕಾಲೇಜು ಓಪನ್.. ಚಾಮರಾಜನಗರದಲ್ಲಿ ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆ - ಕೋವಿಡ್ ಮುಂಜಾಗ್ರತಾ ಕ್ರಮ

ಜಿಲ್ಲೆಯಲ್ಲಿ ಒಟ್ಟು 1199 ಶಾಲೆಗಳಿದ್ದು, 1-5ನೇ ತರಗತಿವರೆಗೆ 59,945, 6-9ನೇ ತರಗತಿವರೆಗೆ 46,429, ಎಸ್​ಎಸ್​ಎಲ್​ಸಿ 12,100 ವಿದ್ಯಾರ್ಥಿಗಳಿದ್ದಾರೆ. 61 ಪಿಯು ಕಾಲೇಜುಗಳಿದ್ದು, 6118 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈಗಾಗಲೇ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

school
school

By

Published : Dec 31, 2020, 8:53 PM IST

ಚಾಮರಾಜನಗರ:ನೂತನ ವರ್ಷದ ಆರಂಭದ ದಿನದಲ್ಲೇ ಶಾಲಾ - ಕಾಲೇಜು ಆರಂಭವಾಗಲಿದ್ದು, ಶಿಕ್ಷಣ ಇಲಾಖೆ ಸಕಲ ತಯಾರಿ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲು ತಯಾರಾಗಿದೆ.

ಜಿಲ್ಲೆಯಲ್ಲಿ ಒಟ್ಟು 1199 ಶಾಲೆಗಳಿದ್ದು, 1-5ನೇ ತರಗತಿವರೆಗೆ 59,945, 6-9ನೇ ತರಗತಿವರೆಗೆ 46,429, ಎಸ್​ಎಸ್​ಎಲ್​ಸಿ 12,100 ವಿದ್ಯಾರ್ಥಿಗಳಿದ್ದಾರೆ. ಎಸ್ಒಪಿ ಪ್ರಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಪ್ರತಿ ಶಾಲೆಗೆ ಎನ್ಫೋರ್ಸ್​ಮೆಂಟ್ ಆಫೀಸರ್​ಗಳನ್ನು ನೇಮಿಸಲಾಗಿದೆ ಎಂದು ಡಿಡಿಪಿಐ ಜವರೇಗೌಡ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಶಿಕ್ಷಣ ಇಲಾಖೆಯಿಂದ ಸಕಲ ಸಿದ್ಧತೆ

ಜಿಲ್ಲೆಯಲ್ಲಿ 61 ಪಿಯು ಕಾಲೇಜುಗಳಿದ್ದು, 6118 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 391 ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ. ಎಲ್ಲ ಕಾಲೇಜುಗಳಲ್ಲಿ ಥರ್ಮಲ್ ಸ್ಕಾನರ್ ಲಭ್ಯವಿದ್ದು ಅವಶ್ಯವಿದ್ದಷ್ಟು ಸ್ಯಾನಿಟೈಸರ್ ಖರೀದಿಸಲು ಪಿಯು ಬೋರ್ಡ್ ಅನುಮತಿ ಕೊಟ್ಟಿರುವುದಾಗಿ ಪಿಯು ಡಿಡಿ ಕೃಷ್ಣಮೂರ್ತಿ ತಿಳಿಸಿದರು.

10ನೇ ತರಗತಿ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾಗಲಿದ್ದು, 6ರಿಂದ 9ನೇ ತರಗತಿಯ ಮಕ್ಕಳಿಗೆ ಶಾಲೆಯ ಆವರಣದಲ್ಲಿಯೇ ವಿದ್ಯಾಗಮವನ್ನು ಪಾಳಿ ವ್ಯವಸ್ಥೆಯಲ್ಲಿ ಆರಂಭಿಸಲು ಸೂಕ್ತ ಮಾರ್ಗಸೂಚಿ ರೂಪಿಸಲಾಗಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ 10ನೇ ತರಗತಿಗಳನ್ನು ಹಾಗೂ ಬೆಳಗ್ಗೆ 10ರಿಂದ 4.30ರವರೆಗೆ ಪಿಯುಸಿ ತರಗತಿಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಿ ನಡೆಸಲಿದ್ದೇವೆ‌. ವಿದ್ಯಾಗಮಕ್ಕೆ ಬರುವ ಮಕ್ಕಳಿಗೆ ಹಾಗೂ ಶಾಲಾ - ಕಾಲೇಜುಗಳಿಗೆ ಬರುವ 10ನೇ ತರಗತಿಯ ಹಾಗೂ ಪಿಯುಸಿ ಮಕ್ಕಳಿಗೆ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ವಿದ್ಯಾಗಮ ಹಾಗೂ ಶಾಲಾ - ಕಾಲೇಜುಗಳಿಗೆ ಬರುವ ಮಕ್ಕಳು ಪಾಲಕರ ಸಹಮತಿ ಮತ್ತು ಒಪ್ಪಿಗೆ ಪ್ರಮಾಣ ಪತ್ರವನ್ನು ಪಡೆಯುವ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ತರಗತಿಗಳಿಗೆ ಬರಬೇಕು. ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳಿರುವ ಮಕ್ಕಳು ಶಾಲಾ-ಕಾಲೇಜಿಗೆ ಹಾಗೂ ವಿದ್ಯಾಗಮಕ್ಕೆ ಹಾಜರಾಗುವಂತಿಲ್ಲ. ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ತರಗತಿಗಳಿಗೆ ಆಗಮಿಸುವುದು ಎಂದು ಅವರು ತಿಳಿಸಿದ್ದಾರೆ.

ಮೊದಲಿನಂತೆ ಶಾಲೆಗಳಲ್ಲಿ ಅಕ್ಷರದಾಸೋಹ ಹಾಗೂ ಹಾಲು ವಿತರಣೆ ವ್ಯವಸ್ಥೆ ಇರುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳ ಮನೆಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು. ಅಲ್ಲದೇ ಶಾಲಾ - ಕಾಲೇಜುಗಳಲ್ಲೇ ಮಕ್ಕಳಿಗೆ ಬಿಸಿ ನೀರು ನೀಡುವ ವ್ಯವಸ್ಥೆ ಇರಲಿದೆ.

ಜಿಲ್ಲಾದ್ಯಂತ ಹಲವು ಶಾಲಾ-ಕಾಲೇಜುಗಳಲ್ಲಿ ಸ್ವಾಗತದ ರಂಗೋಲಿಗಳನ್ನು ಬಿಡಿಸಲಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ವೃತ್ತಾಕಾರಗಳನ್ನು ರಚಿಸಲಾಗಿದೆ‌. ಕೆಲ ಸಂಘಟನೆಗಳು ಕೂಡ ಶಾಲೆಗೆ ಬರುವ ಮಕ್ಕಳಿಗೆ ಧೈರ್ಯತುಂಬಿ ಸ್ವಾಗತ ಕೋರಲು ಜಿಲ್ಲೆಯಲ್ಲಿ ತಯಾರಿ ನಡೆಸಿವೆ.

ABOUT THE AUTHOR

...view details