ಹುಬ್ಬಳ್ಳಿ/ಮಂಡ್ಯ/ಚಾಮರಾಜನಗರ: ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಶಾಲೆಯತ್ತ ಆಗಮಿಸಿದ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಗುಲಾಬಿ ಹೂ ಕೊಟ್ಟು ಬರಮಾಡಿಕೊಂಡರು.
ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಮಂಡ್ಯ ಶಿಕ್ಷಕರು:
ಸಕ್ಕರೆ ನಾಡಿನಲ್ಲಿ ಸಹ ಮಕ್ಕಳನ್ನು ಶಿಕ್ಷಕರು ಅದ್ಧೂರಿಯಾಗಿ ಬರಮಾಡಿಕೊಂಡರು. ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಶಾಲೆಗೆ ವಿದ್ಯಾರ್ಥಿಗಳು ಆಗಮಿಸಿದರು.
ಕೋವಿಡ್-19 ಸೋಂಕಿನ ಪ್ರಮಾಣ ಶೇ. 2ಕ್ಕಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ 1ರಿಂದ 10ನೇ ತರಗತಿಗಳಿಗೆ ಭೌತಿಕ ತರಗತಿಗಳನ್ನು ಬಿಟ್ಟು ಪರ್ಯಾಯ ವಿಧಾನದಲ್ಲಿ (ಆನ್ ಲೈನ್) ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯನ್ನು ಮುಂದುವರಿಯಲು ಜೂನ್ 10 ರಂದು ಸರ್ಕಾರ ಆದೇಶಿಸಿತ್ತು. ಅದಾದ ಎರಡು ತಿಂಗಳ ಬಳಿಕ ಆ. 16 ರಂದು ಸೋಂಕಿನ ಪ್ರಮಾಣ ಶೇ.2ಕ್ಕಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ ಆ. 23 ರಿಂದ 9 ಮತ್ತು10ನೇ ತರಗತಿಗಳನ್ನು ಪ್ರಾರಂಭದಲ್ಲಿ ನಿತ್ಯ ಅರ್ಧದಿನ (ಬೆಳಗಿನ ಅವಧಿ) ನಡೆಸಲು ಅನುಮತಿಸಿ ಸುತ್ತೋಲೆ ಹೊರಡಿಸಿತ್ತು.
ಈ ಮಧ್ಯೆ ಮೂರಾಲ್ಕು ದಿನಗಳ ಹಿಂದೆ ಆ, 23 ರಿಂದಲೇ ಪ್ರಥಮ ಮತ್ತು ದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನು ಆರಂಭಿಸಲು ಅವಕಾಶ ನೀಡಿ ಸರ್ಕಾರ ಆದೇಶಿಸಿದೆ. ಶಾಲಾ-ಕಾಲೇಜುಗಳ ಆರಂಭಕ್ಕೆ ಎರಡೂ ಇಲಾಖೆಗಳು ಅಗತ್ಯ ತಯಾರಿ ನಡೆಸಿವೆ. ಆದರೆ, ತರಗತಿಗಳಿಗೆ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ, ಶಾಲೆಗೆ ಬರಲು ಇಷ್ಟವಿಲ್ಲದ ಮಕ್ಕಳು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಪಾಠ ಕೇಳಬಹುದಾಗಿದೆ.