ಕೊಳ್ಳೇಗಾಲ(ಚಾಮರಾಜನಗರ):ಸಿಮೆಂಟ್ ತುಂಬಿದ ಲಾರಿಯೊಂದು ಸಿನಿಮಿಯ ಮಾದರಿಯಲ್ಲಿ ಅಪಘಾತ ಎಸಗಿರುವ ಘಟನೆ ಪಟ್ಟಣದಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಸಂಭವಿಸಿದೆ. ದೊಡ್ಡಿಂದುವಾಡಿ ಗ್ರಾಮದ ರಾಮಕೃಷ್ಣ, ಧನಗೆರೆ ಗ್ರಾಮದ ಶಿವಮಲ್ಲು, ಪಟ್ಟಣದ ರವಿ, ಚೇತನ್ ಅಪಘಾತಕ್ಕೀಡಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿದಿದೆ.
ನಿಯಂತ್ರಣ ತಪ್ಪಿ ಸಿಕ್ಕ ಸಿಕ್ಕವರ ಮೇಲೆ ಲಾರಿ ಹತ್ತಿಸಿದ ಚಾಲಕ ಘಟನೆ ವಿವರ:ಶನಿವಾರ 11.30 ರ ಸುಮಾರಿಗೆ ಸಿಮೆಂಟ್ ತುಂಬಿದ ಲಾರಿ ಮೈಸೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ವೇಳೆ ಅಚ್ಗಾಳ ಯಾತ್ರಿ ನಿವಾಸ್ ಬಳಿ ಅಚಾನಕ್ಕಾಗಿ ಅಡ್ಡಲಾಗಿ ಬಂದ ವ್ಯಕ್ತಿಯ ಮೇಲೆ ಚಾಲಕ ನಿಯಂತ್ರಿಸಲಾಗದೆ ಆತನ ಮೇಲೆ ಲಾರಿ ಓಡಿಸಿದ್ದಾನೆ. ಪರಿಣಾಮ ಲಾರಿ ಕೆಳಗೆ ಸಿಲುಕಿದ ರಾಮಕೃಷ್ಣ ಎಂಬಾತ ಅದೃಷ್ಟವಶಾತ್ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆದರೆ ಚಾಲಕ ಲಾರಿ ಕೆಳಗೆ ಸಿಲುಕಿದ ವ್ಯಕ್ತಿ ಸತ್ತಿದ್ದಾನೆ ಎಂಬ ಆತಂಕದಲ್ಲೇ, ಭಯಭೀತನಾಗಿ ಹೆದರಿ ಲಾರಿ ನಿಲ್ಲಿಸದೆ ವೇಗವಾಗಿ ಓಡಿಸತೊಡಗಿದ್ದಾನೆ. ಈ ವೇಳೆ ಲಾರಿ ನಿಲ್ಲಸದೆ ಹೋದ ಚಾಲಕ ತಪ್ಪಿಸಿಕೊಂಡು ಪರಾರಿಯಾಗುತ್ತಾನೆಂದು ಆಕ್ರೋಶಗೊಂಡ ಸಾರ್ವಜನಿಕರು ಚಾಲಕನನ್ನು ಬೆನ್ನಟ್ಟಿದ್ದಾರೆ. ಚಾಲಕ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಜಿ.ವಿ.ಗೌಡ ಹಾಸ್ಟೆಲ್ ಬಳಿ ಹೆದ್ದಾರಿ ಬದಿ ನಿಂತಿದ್ದ 2 ಲಾರಿಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಪಕ್ಕದಲ್ಲಿದ ಶೆಡ್ ಒಳಗೆ ನುಗ್ಗಿದೆ. ಈ ವೇಳೆ ಲಾರಿ ಮಗ್ಗುಲಲ್ಲಿ ಸ್ಕೂಟರ್ ಗಳನ್ನು ನಿಲ್ಲಿಸಿ ಮಾತನಾಡುತ್ತಿದ್ದ ರವಿ, ಚೇತನ್ ಎಂಬುವರ ಮೇಲೆ ನುಗ್ಗಿದೆ. ಪರಿಣಾಮ ಲಾರಿ ಅಡಿಗೆ ಸಿಲುಕಿದ್ದು 2 ಸ್ಕೂಟರ್ ಗಳು ಜಖಂಗೊಂಡಿದ್ದು ರವಿ, ಚೇತನ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊನೆಗೂ ಚಾಲಕ ಲಾರಿ ನಿಲ್ಲಿಸದ್ದರಿಂದ ಬೆನ್ನಟ್ಟಿದ ಸಾರ್ವಜನಿಕರಿಂದ ತಪ್ಪಿಸಿಕೊಂಡು ಓಡಿ ಹೋಗಿ ಪೊಲೀಸ್ ಠಾಣೆ ಒಳಗೆ ನುಗ್ಗಿದ್ದಾನೆ. ಚಾಲಕನ ನಡವಳಿಕೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಪೊಲೀಸರು ಸಾರ್ವಜನಿಕರನ್ನು ಮನವೊಲಿಸಿ ಕಳುಹಿಸಿದ್ದಾರೆ. ಬಳಿಕ ನಾಲ್ವರು ಗಾಯಾಳುಗಳು ಕೊಳ್ಳೇಗಾಲಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.