ಕರ್ನಾಟಕ

karnataka

ETV Bharat / state

ವಾರದಲ್ಲಿ 6 ದಿನ ಟೈಲರ್, ಒಂದಿನ‌ ಆ್ಯಕ್ಟರ್.. ಚಾಮರಾಜನಗರದಲ್ಲೋರ್ವ ರೀಲ್ಸ್ ಸ್ಟಾರ್!!

ಡಾ. ರಾಜ್​ ಅಭಿಮಾನಿ ಈ ರೀಲ್ಸ್​ ಸ್ಟಾರ್​- ಅಣ್ಣಾವ್ರ ಹಾಡುಗಳಿಗೇ ಮಿಮಿಕ್ರಿ​ ಮಾಡುವ ಟೈಲರ್​ ಚಂದ್ರಶೇಖರ್​-ಅಭಿನಯ ಮಾತ್ರವಲ್ಲ, ಹಾಡಿಗೆ ತಕ್ಕಂತಹ ಕಾಸ್ಟ್ಯೂಮ್ಸ್​ನೊಂದಿಗೆ ರೀಲ್ಸ್​ ಮಾಡುವ ಚಂದ್ರು ವಿಡಿಯೋಗಳು ನೆಟ್ಟಿಗರಿಗೂ ಇಷ್ಟ.

Reels Star Chandrashekhar
ರೀಲ್ಸ್​ ಸ್ಟಾರ್​ ಚಂದ್ರಶೇಖರ್​

By

Published : Jul 24, 2022, 5:57 PM IST

ಚಾಮರಾಜನಗರ: ಕಲೆ, ನಟನೆಗೆ ವಯಸ್ಸು, ಪ್ರದೇಶ, ನೌಕರಿಯ ಯಾವುದೇ ಹಂಗಿಲ್ಲ ಎಂಬುದಕ್ಕೆ ಈ ವ್ಯಕ್ತಿ ಉದಾಹರಣೆ. ವಾರದಲ್ಲಿ 6 ದಿನ ವೃತ್ತಿ ಮಾಡುವ ಇವರು ಒಂದಿಡೀ ದಿನವನ್ನು ನಟನೆಗೆ ಮೀಸಲಿಡುತ್ತಿದ್ದಾರೆ. ಹನೂರು ಪಟ್ಟಣದಲ್ಲಿರುವ ಚಂದ್ರಶೇಖರ್ @ ಚಂದ್ರು ಎಂಬ ಟೈಲರ್ ಡಾ. ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಭಾನುವಾರ ಬಂತೆಂದರೆ ನಟನೆಗೆ ಇಳಿಯುತ್ತಾರೆ.

ಅಣ್ಣಾವ್ರ ನಟನೆಯ ಮಿಮಿಕ್ರಿ ಮಾಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಇಲ್ಲಿಯವರೆಗೂ 650ಕ್ಕೂ ಹೆಚ್ಚು ವಿಡಿಯೋಗಳನ್ನು ಮಾಡಿದ್ದು, ಎಲ್ಲವೂ ಅಣ್ಣಾವ್ರದ್ದೇ ಎಂಬುದು ವಿಶೇಷ. ಟಿಕ್​ಟಾಕ್, ಯೂಟ್ಯೂಬ್ ಶಾರ್ಟ್ಸ್​ಗಳನ್ನು ನೋಡಿ ಪ್ರೇರಣೆಗೊಂಡ ಚಂದ್ರು ಅವರು, ರಾಜ್ ಅಭಿನಯದ ಹಾಡುಗಳು, ಡೈಲಾಗ್​ಗಳನ್ನು ಅಭಿನಯಿಸುತ್ತಿದ್ದು, ಸಂಬಂಧಿಕರ ಮಕ್ಕಳು ಇವರಿಗೆ ಸಾಥ್ ಕೊಡುತ್ತಾರೆ.

ಚಂದ್ರಶೇಖರ್​ ರೀಲ್ಸ್​ ವಿಡಿಯೋ

ಜತೆಗೆ ಪತ್ನಿ ಅನಿತಾ ಅವರೂ ಸಪೋರ್ಟ್ ಮಾಡುತ್ತಾರೆ. ಭಾನುವಾರ ಸಾಮಾನ್ಯವಾಗಿ ಎಲ್ಲರೂ ಬಾಡೂಟ ನೆನಪಿಸಿಕೊಂಡರೇ ಚಂದ್ರು ಮಾತ್ರ ಈ ವಾರ ಯಾವ ಹಾಡಿಗೆ ಆ್ಯಕ್ಟಿಂಗ್ ಮಾಡೋದು ಎಂಬ ಗುಂಗಿ‌ನಲ್ಲಿರುತ್ತಾರೆ.

ಡ್ಯಾನ್ಸ್ ವಿಥ್ ಕಾಸ್ಟೂಮ್ಸ್:ಸಾಮಾನ್ಯವಾಗಿ ಯೂಟ್ಯೂಬ್ ಶಾರ್ಟ್ಸ್, ಇನ್ಸ್ಟಾ ರೀಲ್ಸ್ ಮಾಡೋರು ಸಹಜವಾಗಿ ಅಭಿನಯ ಮಾಡಿದರೇ ಚಂದ್ರು ಅವರು ಒಂದು ಹೆಜ್ಜೆ ಮುಂದೆ ಹೋಗಿ ಕಾಸ್ಟ್ಯೂಮ್ಸ್ ಹಾಕಿಕೊಂಡು ಆ್ಯಕ್ಟ್ ಮಾಡುತ್ತಾರೆ. ಅಣ್ಣಾವ್ರ ಯೂನಿಕ್ ಮೀಸೆಯಲ್ಲಿ ವಾರಕ್ಕೊಮ್ಮೆ ಮಿಂಚುತ್ತಾರೆ. ಕವಿರತ್ನ ಕಾಳಿದಾಸದ ಕುರಿಗಾಹಿ, ಬಂಗಾರದ ಪಂಜರದ ಮುಗ್ಧ ಹಳ್ಳಿ ಹುಡುಗ, ಪ್ರೊಫೆಸರ್, ಭಕ್ತ ಪ್ರಹ್ಲಾದ ಚಿತ್ರದ ಹಿರಣ್ಯಕಶಿಪು ಹೀಗೆ ಬಗೆಬಗೆಯ ಅವತಾರದಲ್ಲಿ ಬೆಟ್ಟ, ಗುಡ್ಡ, ನೀರಿನ ಝರಿ ಹೀಗೆ ವಿವಿಧ ಲೋಕೇಷನ್​ಗಳಲ್ಲಿ ವಿಡಿಯೋ ಮಾಡಿ ನೆಟ್ಟಿಗರ ಮನ ಗೆದ್ದಿದ್ದಾರೆ. ಅಗಾಗ್ಗೆ ಇವರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.

ಅವರಿವರನ್ನು ನೋಡಿ ಮಾಡುತ್ತಿದ್ದೇನೆ:ತಮ್ಮ‌ ರೀಲ್ಸ್ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಚಂದ್ರು, ಅವರಿವರ ವಿಡಿಯೋ ನೋಡಿ ನಾನು ಯಾಕೆ ಅಣ್ಣಾವ್ರ ಹಾಗೆ ನಟನೆ ಮಾಡಬಾರದು ಎಂದು ಅಭಿನಯ ಪ್ರಾರಂಭಿಸಿದೆ. ನನ್ನ ಪತ್ನಿ ನೀವೊಬ್ಬರೇ ಮಾಡಿ ಚೆನ್ನಾಗಿರುತ್ತೆ ಎಂದಿದ್ದರಿಂದ ನಾನೊಬ್ಬನೇ ಆ್ಯಕ್ಟ್ ಮಾಡುತ್ತಿದ್ದೇನೆ. ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದು, ಸಾಕಷ್ಟು ಅಭಿಮಾನಿಗಳಾಗಿದ್ದಾರೆ. ಭಾನುವಾರ ಬಂತೆಂದರೆ ಕಾಸ್ಟ್ಯೂಮ್ಸ್ ತೆಗೆದುಕೊಂಡು ಬೆಟ್ಟ, ಝರಿ ಪ್ರದೇಶಗಳಿಗೆ ಹೊರಟು ಬಿಡುತ್ತೇನೆ ಎಂದರು.

ಒಟ್ಟಿನಲ್ಲಿ ತಂತ್ರಜ್ಞಾನ ಮುಂದುವರೆದಂತೆಲ್ಲಾ ಅಭಿನಯಕ್ಕೆ ಹಾತೊರೆಯುವವರಿಗೆ ವೇದಿಕೆ ಸಿಗುತ್ತಿದೆ. ಅದನ್ನು ಕೆಲವರು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಚಂದ್ರು ಉದಾಹರಣೆಯಾಗಿದ್ದಾರೆ.

ಇದನ್ನೂ ಓದಿ :ದಿ ಐಡಲ್​ಗೆ ದಕ್ಷಿಣ ಕೊರಿಯಾದ ಗಾಯಕಿ ಜೆನ್ನಿ ಕಿಮ್ ಎಂಟ್ರಿ

ABOUT THE AUTHOR

...view details