ಚಾಮರಾಜನಗರ:ಕೇರಳದಲ್ಲಿ ಇಬ್ಬರು ನಿಫಾ ವೈರಸ್ನಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಗಡಿ ಹಂಚಿಕೊಂಡಿರುವ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.
ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಗೂಡ್ಸ್ ವಾಹನಗಳಿಗೆ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಂದಿ ಸೇರಿದಂತೆ ಮಾಂಸಹಾರ ಪದಾರ್ಥ ಸಾಗಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದ್ದು, ಗುರುವಾರದಿಂದ ಗುಂಡ್ಲುಪೇಟೆ ಕಾಡಂಚಿನ ಗ್ರಾಮಗಳಲ್ಲಿ ಮನೆ-ಮನೆ ಸರ್ವೇ ನಡೆಸಿ, ರೋಗ ಲಕ್ಷಣಗಳು ಕಂಡು ಬಂದವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಹಾಸಿಗೆಗಳ ವಿಶೇಷ ವಾರ್ಡ್ ನಿರ್ಮಾಣ ಮಾಡಿ, ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ.
ಈ ಬಗ್ಗೆ ಡಿಎಚ್ಒ ಡಾ. ವಿಶ್ವೇಶ್ವರಯ್ಯ ಅವರು ಪ್ರತಿಕ್ರಿಯಿಸಿದ್ದು, ''ಕೇರಳದಲ್ಲಿ ಇಬ್ಬರು ಮಕ್ಕಳಿಗೆ ನಿಫಾ ವೈರಸ್ ಬಂದು ಮೃತಪಟ್ಟ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ಪೋಸ್ಟ್ನಲ್ಲಿ ಅಲರ್ಟ್ ಆಗಿದ್ದೇವೆ. ಕೇರಳದಿಂದ ಬರುವ ಮಾಂಸವಿರಬಹುದು, ಹಂದಿಗಳ ಸಾಗಣೆ ಇರಬಹುದು. ಜೊತೆಗೆ ಅಲ್ಲಿನ ಸುತ್ತಮುತ್ತಲಿರುವ ಸುಮಾರು 158 ಹಳ್ಳಿಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಕಮ್ಯೂನಿಟಿ ಹೆಲ್ತ್ ಆಫೀಸರ್ಗಳಿಗೆ ನಿರ್ದೇಶನವನ್ನು ನೀಡಿದ್ದೇವೆ. ನಾಳೆಯಿಂದ ಪ್ರತಿ ಮನೆ ಮನೆಗೂ ಭೇಟಿ ನೀಡಬೇಕು. ಒಂದು ವೇಳೆ ಅವರಿಗೆ ರೋಗದ ಲಕ್ಷಣ ಪತ್ತೆಯಾದ್ರೆ ಸ್ವ್ಯಾಬ್ ಟೆಸ್ಟ್ ಮಾಡುವಂತೆಯೂ ನಾವು ಸೂಚಿಸಿದ್ದೇವೆ'' ಎಂದರು.
ಅಲ್ಲದೇ ಚೆಕ್ಪೋಸ್ಟ್ನಲ್ಲಿ ಮಾಂಸದ ಸಾಗಾಣಿಕೆಯಾಗುತ್ತಿದ್ದರೆ, ಹಂದಿಗಳ ಸಾಗಾಣಿಕೆಯಾಗುತ್ತಿದ್ದರೆ ಅಥವಾ ಬಾವುಲಿ ಕಚ್ಚಿರುವ ಹಣ್ಣುಗಳು ಬರುತ್ತಿದ್ದರೆ ಅಂತಹ ಹಣ್ಣುಗಳನ್ನು ತಪಾಸಣೆ ಮಾಡಿ ಬಿಡುವಂತೆ ನಾವು ಹೇಳಿದ್ದೇವೆ. ಕೇರಳದ ಬಾರ್ಡರ್ನಿಂದ ರಾಜ್ಯಕ್ಕೆ ಹಂದಿಗಳು ಬರುತ್ತಿದ್ದರೆ ಅವುಗಳನ್ನು ತಪಾಸಣೆ ಮಾಡಿಕೊಳ್ಳಬೇಕಾಗಿದೆ. ಅಲ್ಲದೇ ಅವುಗಳನ್ನು ಅಲ್ಲಿಯೇ ತಡೆಯಬೇಕಾಗುತ್ತದೆ. ಏಕೆಂದರೆ ಅಲ್ಲಿನ ಹಂದಿಗಳಿಗೆ ಕಾಯಿಲೆ ಇದ್ದರೆ ಅವು ಇಲ್ಲಿಗೆ ಬಂದು ರೋಗವನ್ನು ಹರಡುವ ಸಾಧ್ಯತೆ ಹೆಚ್ಚಿರುತ್ತೆ ಎಂದರು.
ಜೊತೆಗೆ ಇದೀಗ ಗಡಿಭಾಗದ ಎಲ್ಲಾ 158 ಗ್ರಾಮಗಳಲ್ಲಿಯೂ ಹೈ ಅಲರ್ಟ್ ಆಗಿದ್ದೇವೆ. ಆರೋಗ್ಯ ತಪಾಸಣಾ ಕೇಂದ್ರವನ್ನು ತೆರೆದಿದ್ದೇವೆ. ಅಲ್ಲದೇ, ರೋಗ ಲಕ್ಷಣಗಳು ಕಂಡುಬಂದರೆ ಸ್ವ್ಯಾಬ್ ಟೆಸ್ಟ್ ಕೂಡಾ ನಡೆಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ :ಕೋಝಿಕ್ಕೋಡ್ನಲ್ಲಿ ಇಬ್ಬರು ನಿಫಾ ವೈರಸ್ನಿಂದ ಮೃತಪಟ್ಟಿದ್ದಾರೆ ಎಂದು ಕೇರಳದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಸುಳ್ಯ ಸೇರಿದಂತೆ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕರ್ನಾಟಕ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈಗಾಗಲೇ ನಿಫಾ ವೈರಸ್ ಪತ್ತೆಯಾಗಿ ಇಬ್ಬರು ಮೃತಪಟ್ಟ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಮರುದ್ವಾಂಕರ, ಆಯಂಚೇರಿ, ಕಾವಿಲಂಪ್ಪಾರ, ವಿಲ್ಯಾಂಪಳ್ಳಿ, ಕುಟ್ಯಾಡಿ, ಮಂಗಲಾಡ್ ಸೇರಿದಂತೆ ಹಲವಾರು ಪ್ರದೇಶಗಳನ್ನು ಕಂಟೋನ್ಮೆಂಟ್ ಪ್ರದೇಶಗಳಾಗಿ ಘೋಷಣೆ ಮಾಡಲಾಗಿದೆ. ಮಲಪ್ಪುರಂ, ಕಣ್ಣೂರು, ವಯನಾಡ್, ಕಾಸರಗೋಡು ಜಿಲ್ಲೆಗಳಲ್ಲಿ ಮುಂಜಾಗ್ರತಾ ನಿರ್ದೇಶನವನ್ನು ಕೇರಳದ ಆರೋಗ್ಯ ಇಲಾಖೆ ನೀಡಿದೆ.
ಇದನ್ನೂ ಓದಿ:Nipah virus: ಕೇರಳದಲ್ಲಿ ನಿಫಾ ವೈರಸ್ಗೆ ಇಬ್ಬರು ಬಲಿ.. ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸೂಚನೆ