ಚಾಮರಾಜನಗರ: ಶಾಲಾ - ಕಾಲೇಜಿನ ವಿದ್ಯಾರ್ಥಿಗಳು ಸಹಾಯ ಧನಕ್ಕೆ ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಅವರಿಗೆ ಹಣ ಸಿಗುತ್ತಿಲ್ಲ. ಇನ್ನು, ವಿಶೇಷ ಚೇತನರಿಗೆ ನೀಡಬೇಕಿರುವ ತ್ರಿಚಕ್ರ ವಾಹನಗಳು ತುಕ್ಕು ಹಿಡಿಯುತ್ತಿದ್ದರೂ ಫಲಾನುಭವಿಗಳಿಗೆ ವಿತರಿಸದೇ ಗ್ರಹಣ ಹಿಡಿದಂತೆ ಅಧಿಕಾರಿಗಳು, ಪುರಸಭೆ ಅಧ್ಯಕ್ಷರು ಕುಳಿತಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ: 'ವಿದ್ಯಾರ್ಥಿಗಳಿಗಿಲ್ಲ ಹಣ- ವಿಶೇಷ ಚೇತನರಿಗಿಲ್ಲ ವಾಹನ'
ಶಾಲಾ - ಕಾಲೇಜು ವಿದ್ಯಾರ್ಥಿಗಳ ಸಹಾಯ ಧನ ಹಾಗೂ ವಿಶೇಷ ಚೇತನರಿಗೆ ನೀಡಬೇಕಿರುವ ತ್ರಿಚಕ್ರ ವಾಹನಗಳು ತುಕ್ಕು ಹಿಡಿಯುತ್ತಿದ್ದರೂ ಫಲಾನುಭವಿಗಳಿಗೆ ವಿತರಿಸದೇ ಗುಂಡ್ಲುಪೇಟೆ ಪುರಸಭೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜನವರಿ - ಫೆಬ್ರವರಿ ತಿಂಗಳಿನಲ್ಲೇ ಎಸ್ಎಸ್ಎಲ್ಸಿ, ಪಿಯುಸಿ ಜೊತೆಗೆ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೊಡಬೇಕಿದ್ದ ಸಹಾಯಧನವನ್ನು ಇನ್ನೂ ಕೂಡ ವಿತರಿಸದೇ ಇರುವುದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇತ್ತ ವಿಶೇಷ ಚೇತನರಿಗೆ ನೀಡಲು ಈಗಾಗಲೇ ಖರೀದಿಸಿರುವ ತ್ರಿಚಕ್ರ ವಾಹನಗಳನ್ನು ವಿಲೇವಾರಿ ಮಾಡದೇ ಆಡಳಿತ ವರ್ಗ ಮೀನಮೇಷ ಎಣಿಸುತ್ತಿದ್ದಾರಂತೆ.
ಲಕ್ಷಾಂತರ ರೂ. ಖರ್ಚು ಮಾಡಿ ತಂದಿರುವ ತ್ರಿಚಕ್ರ ವಾಹನಗಳು ತುಕ್ಕು ಹಿಡಿದು ನಿಂತಿದ್ದು, ಸಂಪೂರ್ಣ ಹಾಳಾಗುವ ಮೊದಲೇ ಫಲಾನುಭವಿಗಳ ಕೈ ಸೇರಿದರೆ ಒಳಿತು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಫಲಾನುಭವಿಗಳಿಗೆ ಕೊಡಬೇಕಿರುವ ಹಣ, ವಾಹನವನ್ನು ನೀಡಬೇಕಿದ್ದು, ಈ ಪರಿ ನಿರ್ಲಕ್ಷ್ಯ ಸಲ್ಲದು ಎಂದು ಸ್ಥಳೀಯರು ಕಿಡಿಕಾರಿದ್ದಾರೆ.