ಚಾಮರಾಜನಗರ: ಪೌರಕಾರ್ಮಿಕರೇ ನಮ್ಮ ವೈದ್ಯರು, ಅವರನ್ನು ಇದುವರೆಗೂ ನಾನು ಪೌರಕಾರ್ಮಿಕರಂತೆ ಕಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಣ್ಣಿಸಿದ್ದಾರೆ.
ಜಿಲ್ಲಾ ಪ್ರವಾಸ ಕೈಗೊಂಡು ಕೊರೊನಾ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಫೇಸ್ಬುಕ್ ಲೈವ್ನಲ್ಲಿ ಅವರು ಮಾತನಾಡಿ, ವೈದ್ಯರು ಕಾಯಿಲೆ ಬಂದ ಬಳಿಕ ರೋಗ ಗುಣಪಡಿಸಿದರೆ, ಪೌರಕಾರ್ಮಿಕರು ರೋಗ ಬರದಂತೆ ತಡೆಯುವುದರಿಂದ ಅವರು ಕೂಡಾ ವೈದ್ಯರು. ಆದ್ದರಿಂದ ಅವರಿಗೆ ಬೇಕಾದ ಗ್ಲೌಸ್ಗಳು, ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಹೆಚ್ಚು ಜನ ಹೆಚ್ಚು ಕಾಲ ಮನೆಯಲ್ಲೇ ಇರುವುದರಿಂದ ಮಹಾಮಾರಿಗೆ ಆಹಾರ ಸಿಗದಂತೆ ಮಾಡಬಹುದು. ಆದರೆ ಕೆಲವರು ನಿಷೇಧಾಜ್ಞೆ ಉಲ್ಲಂಘಿಸಿ ವಿನಾ ಕಾರಣ ಓಡಾಡುತ್ತಿರುವರನ್ನು ಬಂಧಿಸಿ ಜೈಲಿಗಟ್ಟಿ ಎಂದು ಸೂಚಿಸಿದ್ದೇನೆ ಎಂದಿದ್ದಾರೆ.
ಜಿಲ್ಲೆ ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಂಡಿರುವುದರಿಂದ ಅಂತಾರಾಜ್ಯಗಳ ಗಡಿಯನ್ನು ಇನ್ನಷ್ಟು ಬಿಗಿ ಮಾಡಬೇಕೆಂದು ಹೇಳಿದ್ದು, ಅಗತ್ಯಕ್ಕೆ ತಕ್ಕ ಸಂಖ್ಯೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ವೈದ್ಯರ ರಕ್ಷಾ ಕವಚವನ್ನು ಹೊಂದಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ವಿದೇಶದಿಂದ ಬಂದ 26 ಮಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಕೊರೊನಾ ವೈರಸ್ನ್ನು ಹಗುರವಾಗಿ ತೆಗೆದುಕೊಳ್ಳಬಾರದು. ನಾವು ಅಂದುಕೊಂಡಿದ್ದಕ್ಕಿಂತ ಅದು ಗಂಭೀರವಾಗಿದೆ ಎಂದು ಇದೇ ವೇಳೆ ಅವರು ಎಚ್ಚರಿಸಿದ್ದಾರೆ.