ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ವಿಶೇಷವಾಗಿ ವಿನ್ಯಾಸಗೊಳಿಸಿರುವ 360 ಡಿಗ್ರಿ ವರ್ಚುವಲ್ 3ಡಿ ಕ್ಯಾಮರಾ ವೀಕ್ಷಣೆಗೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಚಿವ ಲಿಂಬಾವಳಿ ಪ್ರತಿಕ್ರಿಯೆ ಬಳಿಕ ಮಾತನಾಡಿದ ಅರವಿಂದ ಲಿಂಬಾವಳಿ, ಬಿಆರ್ಟಿಯ ಹಲವು ಸುಂದರ ಪ್ರದೇಶಗಳು ಜನನಿರ್ಬಂಧಿತವಾಗಿರುವುದರಿಂದ ಅರಣ್ಯದೊಳಗಡೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅಂತಹ ಪ್ರದೇಶಗಳನ್ನು ಪ್ರವಾಸಿಗರು 3ಡಿ ಚಿತ್ರೀಕರಣವನ್ನು ವಿಆರ್ ಹೆಡ್‍ಸೆಟ್ ಮೂಲಕ ವೀಕ್ಷಿಸಿ ವರ್ಚುವಲ್ ಅನುಭವವನ್ನು ಪಡೆಯಬಹುದು ಎಂದರು.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶವು ಸುಂದರವಾದ ಭೂದೃಶ್ಯ ಹಾಗೂ ವ್ಯಾಪಕವಾದ ಜೀವ ವೈವಿಧ್ಯತೆಯನ್ನು ಹೊಂದಿದ್ದು, ಇವು ಬಿಆರ್ಟಿಯ ಕೋರ್ ಪ್ರದೇಶ ವ್ಯಾಪ್ತಿಯಲ್ಲಿ ಬರುವುದರಿಂದ ದುರ್ಗಮ ಅರಣ್ಯದೊಳಗಡೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು 3ಡಿ ಕ್ಯಾಮರಾದ ಮೂಲಕ ಅವರು ಇರುವ ಸ್ಥಳದಿಂದ 360 ಡಿಗ್ರಿ ಅಂತರದಲ್ಲಿ ಟರ್ನ್ ಆಗಿಯೂ ಸಹ ಕಾಡಿನ ಸುಂದರ ವೈವಿಧ್ಯಗಳನ್ನು ವೀಕ್ಷಿಸಬಹುದು ಎಂದು ತಿಳಿಸಿದರು.
ಬಿಆರ್ಟಿ 360 ಡಿಗ್ರಿ ವರ್ಚುವಲ್ 3ಡಿ ಕ್ಯಾಮರಾಗಳನ್ನು ಕೆ.ಗುಡಿ ಮಾಹಿತಿ ಕೇಂದ್ರದಲ್ಲಿ ಇರಿಸಲಾಗಿದ್ದು, ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ದೊಡ್ಡಸಂಪಿಗೆ, ಹೊನ್ನಮೇಟಿ, ಜೋಡಿಗೆರೆ ಹಾಗೂ ಇತರೆ ಸುಂದರ ಸ್ಥಳಗಳ ಅನುಭವಗಳನ್ನು ವರ್ಚುವಲ್ ಮೂಲಕ ಕಣ್ತುಂಬಿಕೊಳ್ಳಬಹುದು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದ್ದು, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಇದು ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಬಂಡೀಪುರ ಅಭಯಾರಣ್ಯ, ಮಲೈ ಮಹದೇಶ್ವರ, ಕಾವೇರಿ ವನ್ಯಜೀವಿ ಹಾಗೂ ಸಾಮಾಜಿಕ ಅರಣ್ಯ ವಿಭಾಗಗಳಿದ್ದು, ಶೇ. 54ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಅಭಿವೃದ್ಧಿ ದೃಷ್ಟಿಯಿಂದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗುವುದು. ನಿಯಮಗಳಡಿಯಲ್ಲಿ ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಪ್ರಾಣಿ, ಮಾನವ ಸಂಘರ್ಷಗಳನ್ನು ತಡೆಯಲು ಆನೆಕಂದಕ ಹಾಗೂ ರೈಲ್ವೆ ಕಂಬಿಗಳನ್ನು ಬಳಸಿ ಅರಣ್ಯದಂಚಿನಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಚಿರತೆಗಳನ್ನು ಸೆರೆಹಿಡಿಯಲು ಅಗತ್ಯವಾಗಿರುವಷ್ಟು ಬೋನುಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಪರಿಸರ ಸಚಿವರು ಹಾಗೂ ರೈಲ್ವೆ ಸಚಿವರನ್ನು ಭೇಟಿ ಮಾಡಿ ಅಗತ್ಯ ಅನುದಾನ ಒದಗಿಸುವಂತೆ ಕೋರಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಇಲಕಲ್ಲನಲ್ಲಿ ಹೊತ್ತಿ ಉರಿದ ಶಾಪಿಂಗ್ ಕಾಂಪ್ಲೆಕ್ಸ್: ಕೋಟ್ಯಂತರ ರೂಪಾಯಿ ನಷ್ಟ
ಇದಕ್ಕೂ ಮುನ್ನ ಜಾನಪದ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪರೋಕ್ಷವಾಗಿ ಅರಣ್ಯ ಖಾತೆ ನೀಡಿದ್ದಕ್ಕೆ ಸಚಿವ ಅರವಿಂದ ಲಿಂಬಾವಳಿ ಅಸಮಾಧಾನ ಹೊರಹಾಕಿದರು. ಸಮಾರಂಭ ಉದ್ದೇಶಿಸಿ ಮಾತನಾಡುವಾಗ, ಕಾಂಕ್ರಿಟ್ ಕಾಡಿನಿಂದ ಬಂದ ನನಗೆ ಸಾಮಾನ್ಯರಿಗೆ ಇರುವಷ್ಟು ಕಾಡಿನ ಅರಿವಿಲ್ಲವಾದರೂ ಅರಣ್ಯ ಖಾತೆ ನೀಡಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರೊಂದಿಗೆ ನಾನು ಕೂಡ ಶಿಕ್ಷಣ ಸಚಿವನಾಗುವ ನಿರೀಕ್ಷೆಯಲ್ಲಿದ್ದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿವಿಲ್ ಎಂಜಿನಿಯರ್ ಆಗಿರುವ ನನಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಡು ಮತ್ತು ನಾಡಿನ ಖಾತೆ ನೀಡಿದ್ದಾರೆ. ನನ್ನ ಪರಿಸ್ಥಿತಿ ಹೇಗಿದೆ ಎಂದರೆ ರಾತ್ರಿ ವೇಳೆ ಅರಣ್ಯ ಸಚಿವರಾಗಿ ಕಾಡಿನಲ್ಲಿ ಇರಬೇಕು. ಬೆಳಗ್ಗೆ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ನಾಡನ್ನು ನೋಡಿಕೊಳ್ಳಬೇಕು. ಈ ಖಾತೆಗಳನ್ನು ನಿಭಾಯಿಸಲು ದಿನದಲ್ಲಿ 24 ಗಂಟೆ ಸಮಯಬೇಕು. ಖಾತೆಯ ಬಗ್ಗೆ ತಿಳಿದುಕೊಳ್ಳಲು ಇನ್ನಷ್ಟು ಸಮಯಾವಕಾಶ ಬೇಕಾಗಬಹುದು ಎಂದು ಹೇಳಿದರು.