'ಗೃಹ ಲಕ್ಷ್ಮಿ' ಯೋಜನೆ ಚಾಲನೆ ಕುರಿತು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಮರಾಜನಗರ: ಮೈಸೂರಿನಲ್ಲಿ ನಡೆಯಲಿರುವ 'ಗೃಹ ಲಕ್ಷ್ಮಿ' ಯೋಜನೆ ಚಾಲನೆಗೆ ಒಂದರಿಂದ ಒಂದೂವರೆ ಲಕ್ಷ ಮಂದಿ ಮಹಿಳೆಯರು ಭಾಗಿಯಾಗಲಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಲಕ್ಷ್ಮಿ ಯೋಜನೆ ನಿರಂತರವಾಗಿ ಇರಲಿದೆ. ಹಬ್ಬದ ವಾತಾವರಣವನ್ನ ನಮ್ಮ ಮಹಿಳೆಯರು ಸೃಷ್ಟಿಸಿದ್ದಾರೆ. ಐದು ಗ್ಯಾರಂಟಿಗಳಲ್ಲಿ ಬಹಳಷ್ಟು ಸದ್ದು ಮಾಡ್ತಾ ಇರೋದು ಗೃಹ ಲಕ್ಷ್ಮಿ ಯೋಜನೆಯಾಗಿದೆ. ರಾಜ್ಯದ 13 ಸಾವಿರ ಕಡೆ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:Gruha lakshmi scheme: ಮೈಸೂರಿನಲ್ಲಿ ಆಗಸ್ಟ್ 30ರಂದು 'ಗೃಹಲಕ್ಷ್ಮಿ' ಯೋಜನೆಗೆ ಚಾಲನೆ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಆ. 30 ರಂದು ಮೈಸೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ಜನ ಸೇರುವ ಸಾಧ್ಯತೆ ಇದೆ. ರಾಜ್ಯದ ಎಲ್ಲ ಮಹಿಳೆಯರು ಅತ್ಯುತ್ಸಾಹದಿಂದ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯಾದ್ಯಂತ 1.11 ಕೋಟಿ ಜನರಿಂದ ಗೃಹ ಲಕ್ಷ್ಮಿಗೆ ಅರ್ಜಿ ನೋಂದಣಿ ಆಗಿವೆ. ಅರ್ಜಿ ಸಲ್ಲಿಸಲು ಟೈಮ್ ಲಿಮಿಟ್ ಇಲ್ಲ. ಮುಂದಿನ ಬಾರಿಯೂ ನಮ್ಮ ಸರ್ಕಾರ ಬಂದರೆ ಯೋಜನೆ ಮುಂದುವರಿಯಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.
ಇದೇ ವೇಳೆ, ಆಪರೇಷನ್ ಹಸ್ತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತ 'ಯಾರ್ಯಾರಿಗೆ ನಮ್ಮ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತದ ಮೇಲೆ ನಂಬಿಕೆ, ವಿಶ್ವಾಸ ಇದೆಯೋ ಅಂತವರು ಬರ್ತಾರೆ. ಜನಪರ ಕಾರ್ಯಕ್ರಮ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರುತ್ತಿದ್ದಾರೆ. ಯಾವುದೇ ಷರತ್ತು ಇಲ್ಲದೆ ಸೇರುತ್ತಿದ್ದಾರೆ' ಎಂದರು.
ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಒಂದಿಷ್ಟು..:ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳಲ್ಲಿ 'ಗೃಹಲಕ್ಷ್ಮಿ' ಯೋಜನೆ ಕೂಡ ಒಂದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮಿ ಯೋಜನೆ ನೀಡುವುದಾಗಿ ಪಕ್ಷದ ನಾಯಕರು ಚುನಾವಣೆಗೆ ಮುನ್ನವೇ ಗ್ಯಾರಂಟಿಯಾಗಿ ಘೋಷಿಸಿದ್ದರು. ಈ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಷರತ್ತುಗಳು:
- ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
- ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸಲಿದೆ.
- ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ಗಳನ್ನು ಜೋಡಣೆ ಮಾಡಬೇಕು.
- ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಸೌಲಭ್ಯ ಸಿಗುವುದಿಲ್ಲ.
- ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿಯು ಜಿಎಸ್‌ಟಿ ರಿಟರ್ನ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಇದನ್ನೂ ಓದಿ:'ಗೃಹಲಕ್ಷ್ಮಿ ಯೋಜನೆಯಡಿ 1.10 ಕೋಟಿ ಕುಟುಂಬಗಳ ನೋಂದಣಿ, ಆ.30ಕ್ಕೆ ಮೈಸೂರಲ್ಲಿ ಯೋಜನೆಗೆ ಚಾಲನೆ'