ಚಾಮರಾಜನಗರ: ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗ್ರಹಣದ ಸಮಯದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸಹಸ್ರಾರು ಮಂದಿ ಮಾದಪ್ಪನ ದರ್ಶನ ಪಡೆದರು.
ಗ್ರಹಣದಲ್ಲೂ ಮಾದಪ್ಪನ ದರ್ಶನ,ಇತ್ತ ಶಿವಗಂಗೆಯಲ್ಲಿ ಗ್ರಹಣ ನಂತರ ದೇವರ ದರ್ಶನ! ಬೆಳಗ್ಗೆ 6 ಗಂಟೆ ಒಳಗೆ ಮಹದೇಶ್ವರನಿಗೆ ಅಭಿಷೇಕ- ಪೂಜೆ ಮುಗಿಯುವುದರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಯ್ಯಪ್ಪ ಮಾಲಾಧಾರಿಗಳು, ಅಮಾವಾಸ್ಯೆ ಪೂಜೆ ಸಲ್ಲಿಸುವ ಭಕ್ತರು ಮಲೆಮಹದೇಶ್ವರನ ದರ್ಶನ ಪಡೆದರು. ಇನ್ನು, ಪ್ರಸಾದ ವಿತರಣೆಯಲ್ಲೂ ಯಾವುದೇ ಬದಲಾವಣೆ ಇಲ್ಲದಿದ್ದರಿಂದ ದರ್ಶನ ಪಡೆದ ಭಕ್ತರು ಪ್ರಸಾದ ಸೇವಿಸಿದರು. ಜಿಲ್ಲೆಯ ಎಲ್ಲ ದೇಗುಲಗಳು ಗ್ರಹಣ ಕಾಲದಲ್ಲಿ ಮುಚ್ಚಿದವು. ಗ್ರಹಣ ಬಿಟ್ಟ ಬಳಿಕ ದೇಗುಲ ಶುದ್ಧಿಗೊಳಿಸಿ, ವಿಶೇಷ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಇನ್ನೂ ಸೂರ್ಯಗ್ರಹಣ ಹಿನ್ನಲೆ ಪುರಾಣ ಪ್ರಸಿದ್ಧ ದಕ್ಷಿಣ ಕಾಶಿ ಶಿವಗಂಗೆಯ ಶ್ರೀ ಹೊನ್ನಾದೇವಿ ಸಮೇತ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯಗಳನ್ನು ಮುಚ್ಚಲಾಗಿತ್ತು. ಸೂರ್ಯಗ್ರಹಣ ಮುಕ್ತಾಯವಾದ ಮೇಲೆ ದೇವಾಲಯವನ್ನ ಸ್ವಚ್ಚಗೊಳಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟರು.