ಚಾಮರಾಜನಗರ :ನಮ್ಮ ಪೂರ್ವಜರು ನಿತ್ಯದ ಬದುಕಿನಲ್ಲಿ ಕೇವಲ ಸೀಮೆಎಣ್ಣೆ ಬುಡ್ಡಿ ಅಥವಾ ಹತ್ತಿ ಬತ್ತಿಯ ಹಣತೆಗಳನ್ನೇ ಆಶ್ರಯಿಸುತ್ತಿರಲಿಲ್ಲ. ಬದಲಾಗಿ ಮರದ ಮೊಗ್ಗುಗಳನ್ನು ಕೂಡಾ ದೀಪದ ಬತ್ತಿಯಾಗಿ ಉಪಯೋಗಿಸುತ್ತಿದ್ದರು..
ಇದರ ಹೆಸರು ಕರಿಕಲುಮರ. ಕೈಕರಿಕಲು ಮರ ಎಂತಲೂ ಕರೀತಾರೆ. ಪಾಂಡವರ ಬತ್ತಿ ಮರವೆಂದು ಇದು ಪುರಾಣ ಪ್ರಸಿದ್ಧ. ಈ ಮರ, ಅರಣ್ಯಪ್ರದೇಶಗಳಲ್ಲಿ ಕಾಣಸಿಗುತ್ತದೆ. ಅದೇ ರೀತಿ, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲೂ ಈ ಮರಗಳಿದ್ದು, ತೇಗಿನ ಜಾತಿಗೆ ಸೇರಿದ ಪ್ರಭೇದ ಅಂತಾರೆ ಪರಿಸರ ತಜ್ಞರು. ಕರಿಕಲು ಮರದ ಮೊಗ್ಗುಗಳು ಎಷ್ಟು ಬೆಳಕು ನೀಡುತ್ತವೋ, ಇವುಗಳಲ್ಲರಳುವ ಹೂಗಳು ಅಷ್ಟೇ ಸುವಾಸನೆಭರಿತವಾಗಿವೆ. ಈ ಮರದಲ್ಲರಳುವ ಹೂವಿನ ಮೊಗ್ಗುಗಳಿಗೆ ಎಣ್ಣೆಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಹೀಗಾಗಿಯೇ ಎಲೆಗಳು ತಾಸುಗಟ್ಟಲೆ ಉರಿಯಬಲ್ಲವು ಎಂಬುದು ಮತ್ತೊಂದು ಅಚ್ಚರಿ.
ಮರದ ಎಲೆಗಳಲ್ಲಿ ಹೊಟ್ಟಿನ ರೀತಿ ಒಂದು ವಸ್ತು ಉತ್ಪತ್ತಿಯಾಗುವುದರಿಂದ ಹತ್ತಿ ದೀಪದಂತೆ ಈ ಮರದ ಎಲೆಗಳು ಉರಿಯುತ್ತವೆ. ಇದರ ಮೊಗ್ಗಿಗೆ ಎಣ್ಣೆ ಸವರಿ ಹೊತ್ತಿಸಿದಾಗಲೂ ಕೂಡ ಹಣತೆಯಂತೆ ಉರಿಯಲಿದ್ದು, ಬೇರಿನ್ಯಾವ ಮರದ ಮೊಗ್ಗುಗಳಿಗೂ ಈ ವಿಶಿಷ್ಟತೆ ಇದುವರೆಗೂ ಕಂಡು ಬಂದಿಲ್ಲ. ಕಾಡಿನಲ್ಲಿ ವಾಸಿಸುವ ಗಿರಿಜನರು ಸೀಮೆಎಣ್ಣೆ ಬುಡ್ಡಿ, ಹಣತೆ ಬದಲಿಗೆ ಈ ಮೊಗ್ಗಿಗೆ ಹರಳೆಣ್ಣೆ, ಇಲ್ಲವೇ ಎಳ್ಳಣ್ಣೆಯನ್ನು ಸವರಿ ರಾತ್ರಿ ವೇಳೆ ಮನೆಯೊಳಗೆ ಉರಿಸುತ್ತಿದ್ದರು. ಮನುಷ್ಯ ಆಧುನಿಕತೆಗೆ ಒಡ್ಡಿಕೊಂಡಂತೆ ಈ ಮೊಗ್ಗು ತೆರೆಗೆ ಸರಿದು ಲ್ಯಾಂಪ್ಗಳು ಬಂದಿವೆ ಎನ್ನುತ್ತಾರೆ ಸೋಲಿಗ ಮುಖಂಡ ಡಾ. ಮಾದೇಗೌಡ.