ಚಾಮರಾಜನಗರ: ಹಸಿರು ವಲಯ ಚಾಮರಾಜನಗರ ಜಿಲ್ಲಾದ್ಯಂತ ಮಾಸ್ಕ್ ಜಾಗೃತಿ ಏನೋ ಉತ್ತಮವಾಗಿದ್ದರೂ ಸಾಮಾಜಿಕ ಅಂತರ ಮಾತ್ರ ಮರೀಚಿಕೆಯಾಗಿದೆ.
ಹೌದು, ಹಸಿರು ವಲಯವೆಂಬ ಅಸಡ್ಡೆಯಿಂದ ಕೊರೊನಾ ಭೀತಿಯಿಲ್ಲದೆ ಓಡಾಡುತ್ತಿದ್ದು ಸಾಮಾಜಿಕ ಅಂತರ ಮರೀಚಿಕೆಯಾಗಿದೆ. ಸಣ್ಣ ಗೂಡಂಗಡಿಗಳು ತೆರೆದಿರುವುದರಿಂದ ಜನರು ಗುಂಪುಗುಂಪಾಗಿ ಕುಳಿತು ಹರಟೆ ಹೊಡೆಯುವುದು ಸಾಮಾನ್ಯವಾಗಿದ್ದು ಬ್ಯಾಂಕ್ಗಳ ಮುಂದೆ ಜನಜಾತ್ರೆಯೇ ಸೇರುತ್ತಿದೆ.
ಇನ್ನು, ಜಿಲ್ಲೆಯ ಒಳಗಡೆ ವಾಹನ ಸಂಚಾರಕ್ಕೆ ಅವಕಾಶ ಸಿಕ್ಕಿರುವುದರಿಂದ ವಾಹನ ಸಂಚಾರ ಹೆಚ್ಚಿದ್ದು ಸಂಚಾರ ನಿಯಮ ಮಾತ್ರ ಇಲ್ಲವಾಗಿದೆ. ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಸಾಮಾನ್ಯವಾಗಿದ್ದು ಕೋವಿಡ್-19 ಮುಗಿಯುವವರಿಗೆ ಬೈಕ್ನಲ್ಲಿ ಓರ್ವ ಮಾತ್ರ ಸಂಚರಿಸಬೇಕೆಂಬ ನಿರ್ಬಂಧವಿದ್ದರೂ ತ್ರಿಬಲ್ ರೈಡಿಂಗ್ ಮಾತ್ರ ಗಡಿಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.
ಚಾಮರಾಜನಗರದಲ್ಲಿ ಸಾಮಾಜಿಕ ಅಂತರದ ಕೊರತೆ ನಗರಸಭೆ ಪ್ರತಿದಿನ ಜಾಗೃತಿ ಮೂಡಿಸಿ ಮಾಸ್ಕ್ ಧರಿಸಿದವರಿಗೆ ದಂಡ ವಿಧಿಸುತ್ತಿರುವುದರಿಂದ ಜನರು ಮಾಸ್ಕ್ ಧರಿಸಿ ಮನೆ ಹೊರಗಡೆ ಬರುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳು, ವಾಹನ ಸವಾರರು, ಮಕ್ಕಳಾದಿಯಾಗಿ ಮುಖಗವಸು ಧರಿಸುತ್ತಿದ್ದಾರೆ.
ಒಟ್ಟಿನಲ್ಲಿ ಹಸಿರು ವಲಯ ಚಾಮರಾಜನಗರದಲ್ಲಿ ಮಾಸ್ಕ್ ಧರಿಸುವುದು ಒಕೆ ಎಂಬ ಮಟ್ಟದಲ್ಲಿದ್ದರೂ ಸಾಮಾಜಿಕ ಅಂತರ ಮಾತ್ರ ಇಲ್ಲದಾಗಿದೆ.