ಚಾಮರಾಜನಗರ: ಬಿಸಿಪಾತ್ರೆ ಮುಟ್ಟಿದರೆ ಛಾವಣಿ ಹಾರಿ ಹೋಗುವಷ್ಟು ಚೀತ್ಕರಿಸುವ ಜನರ ನಡುವೆ ನಿಗಿನಿಗಿ ಕೆಂಡವನ್ನು ಮೈಮೇಲೆ ಸುರಿದುಕೊಂಡು ಅರ್ಚಕ ಭಕ್ತಿ ಪರಾಕಾಷ್ಠೆ ಮೆರೆದರು. ಇಂಥದ್ದೊಂದು ವಿಶಿಷ್ಠ ಆಚರಣೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಹೋಬಳಿಯ ತೆಳ್ಳನೂರು ಉರ್ಕಾತೇಶ್ವರಿ ಗ್ರಾಮದಲ್ಲಿ ನಡೆಯಿತು. ಈ ವೇಳೆ ಅರ್ಚಕರು ಕೆಂಡವನ್ನು ಕೊಳಗದಲ್ಲಿ ಮೈಮೇಲೆ ಸುರಿದುಕೊಂಡು ನಂತರ ದೇವಿಗೂ ಅರ್ಪಿಸುತ್ತಾರೆ.
ಈ ವಿಶಿಷ್ಟ ಆಚರಣೆ ಹೇಗೆ ಜಾರಿಗೆ ಬಂತು ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಎಲ್ಲಾ ಕೋಮಿನವರು ಒಗ್ಗಟ್ಟಾಗಿ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೊಂಡೋತ್ಸವದಲ್ಲಿ ದೇವಿ ಮಹಾತ್ಮೆಗೆ ಎಲ್ಲರೂ ತಲೆದೂಗುವಂತೆ ಮಾಡುತ್ತದೆ. ಹಸಿ ಗೊಬ್ಬಳಿ ಮರವನ್ನು ಅಂದೇ ಕತ್ತರಿಸಿ ತಂದು ಯಾವುದೇ ಪೆಟ್ರೋಲ್, ತೈಲ ಇಲ್ಲದೇ ಕೇವಲ ಕರ್ಪೂರದಲ್ಲೇ ಹೊತ್ತಿಸಿ ಕೆಂಡ ಮಾಡಲಾಗುತ್ತದೆ.