ಚಾಮರಾಜನಗರ: ಜಿಲ್ಲೆಯ ಶಂಕರಪುರ ಬಡಾವಣೆಯ ಸುರೇಶ್ ಎನ್. ಋಗ್ವೇದಿ ಎಂಬುವರು ಬರೋಬ್ಬರಿ 250ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಹುಟ್ಟುಹಬ್ಬ-ಹುತಾತ್ಮ ದಿನ ಆಚರಿಸಿ ಗೌರವ ಸಲ್ಲಿಸುತ್ತಾ ಬಂದಿದ್ದು, ಮಕ್ಕಳಲ್ಲಿ ರಾಷ್ಟ್ರ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.
ತಮ್ಮ ಮನೆಯ ಮುಂಭಾಗದ 30 ಅಡಿ ಅಗಲ ಹಬ್ಬಿರುವ ಹೊಂಗೆ ಮರದ ಕೆಳಗೆ ಜೈಹಿಂದ್ ಕಟ್ಟೆ ಎಂಬ ವೇದಿಕೆ ನಿರ್ಮಿಸಿದ್ದು, ಮರೆತ ನಾಯಕರನ್ನು ನೆನಪಿಸಿ ಅವರ ಕುರಿತು ತಿಳಿ ಹೇಳುವ ಕಾಯಕವನ್ನು ಕಳೆದ 6 ವರ್ಷದಿಂದ ಮಾಡುತ್ತಾ ಬಂದಿದ್ದಾರೆ.
ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಾಯಕ ಮಂಗಲ ಪಾಂಡೆ, ಕಿರಿ ವಯಸ್ಸಿನ ಹುತಾತ್ಮ ಖದಿರಾಂ ಬೋಸ್, ಐಎನ್ಎನಲ್ಲಿದ್ದ ರಾಮರಾವ್ , ಲಕ್ಷ್ಮಿ ಸೆಹಗಲ್, ತೀವ್ರಗಾಮಿಗಳಾದ ಅಜಾದ್ ಚಂದ್ರಶೇಖರ್, ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಲಾಲ್-ಬಾಲ್-ಪಾಲ್, ಝಾನ್ಸಿರಾಣಿ ಲಕ್ಷ್ಮೀಬಾಯಿ, ತಾತ್ಯಾಟೋಪೆ, ಮದನ್ ಲಾಲ್ ಧಿಂಗ್ರಾ, ರಾಸ್ ಬಿಹಾರಿ ಬೋಸ್ ಇವರೊಂದಿಗೆ ಮಹಾತ್ಮಾ ಗಾಂಧಿ, ನೆಹರೂ, ಠಾಗೂರ್, ಕಮಲಾದೇವಿ, ಅನಿಬೆಸೆಂಟ್, ಅರವಿಂದ ಘೋಷ್, ಈಶ್ವರಚಂದ್ರ ವಿದ್ಯಾಸಾಗರ್, ಜೆ.ಕೃಪಲಾನಿ, ಚಿತ್ತರಂಜನದಾಸ್, ಪಿಂಗಳ್ಳಿ ವೆಂಕಯ್ಯ, ಬಿ.ಆರ್.ಅಂಬೇಡ್ಕರ್, ಮಾಳವೀಯ, ಮೊಹರೆ ಹನುಮಂತರಾಯ, ವಲ್ಲಭಬಾಯಿ ಪಟೇಲ್, ವೀರ ಸಾವರ್ಕರ್, ಸುಭಾಶ್ ಚಂದ್ರಬೋಸ್, ಸುಖದೇವ್, ಜಯದೇವಿತಾಯಿ ಲಿಗಾಡೆ, ಸುರೇಂದ್ರ ಸಾಯಿ, ಪೊತ್ತಿ ಶ್ರೀರಾಮುಲು ಹೀಗೆ 250ಕ್ಕೂ ಹೆಚ್ಚು ಮರೆತನಾಯಕರನ್ನು ನೆನಪಿಸುತ್ತಾ ಬಂದಿದ್ದಾರೆ ಋಗ್ವೇದಿ.