ಚಾಮರಾಜನಗರ: ಕೂಲಿಯಾಳುಗಳ ಕೊರತೆ ಮತ್ತು ಹೆಚ್ಚಿನ ಕೂಲಿ ಭಾರವನ್ನು ನೀಗಿಸುವ ಸಲುವಾಗಿ ಡ್ರೋಣ್ ಮೂಲಕ ಹೊಲಕ್ಕೆ ಔಷಧಿ ಸಿಂಪಡಿಸುವ ಹೊಸ ತಂತ್ರಜ್ಞಾನವನ್ನು ಜಿಲ್ಲೆಯಲ್ಲಿ ರೈತರು ಮತ್ತು ರಸಗೊಬ್ಬರ ವ್ಯಾಪಾರಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸಲಾಯಿತು.
ಡ್ರೋಣ್ ಮೂಲಕ ಬೆಳೆಗೆ ಔಷಧಿ ಸಿಂಪಡಣೆ ಚೆನ್ನೈ ಮೂಲದ ಗರುಡ ಏರೋಸ್ಪೇಸ್ ಎಂಬ ಖಾಸಗಿ ಕಂಪನಿಯೊಂದು ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಡ್ರೋಣ್ ಮೂಲಕ ಔಷಧಿ ಸಿಂಪಡಿಸುವ ಪ್ರಾತ್ಯಕ್ಷಿಕೆಯನ್ನು ರಸಗೊಬ್ಬರ ವ್ಯಾಪಾರಿಗಳು ಮತ್ತು ರೈತರಿಗೆ ತೋರಿಸಿಕೊಟ್ಟಿತು.
ಯಾವ ಪ್ರಮಾಣಲ್ಲಿ ಔಷಧಿ ಸಿಂಪಡಿಸಬೇಕು?, ಎಷ್ಟು ಔಷಧಿ ಸಿಂಪಡಿಸಬೇಕು?, ಔಷಧಿ ಸಿಂಪಡಣೆ ಹೇಗಿರಬೇಕು? ಎಂಬುದನ್ನು ರೈತರು ಡಿಸ್‌ಪ್ಲೇನಲ್ಲಿ ನೋಡಿಕೊಳ್ಳಬಹುದಾಗಿದೆ. ಡ್ರೋಣ್ ಬಾಡಿಗೆ ಪಡೆದರೆ ಎಕರೆಗೆ 400 ರೂ. ವೆಚ್ಚ ಬೀಳಲಿದ್ದು, 10-15 ನಿಮಿಷಕ್ಕೆ ಸಣ್ಣ ಹಿಡುವಳಿದಾರರ ಔಷಧ ಸಿಂಪಡಣೆ ಕಾರ್ಯ ಮುಕ್ತಾಯವಾಗಲಿದೆ. ಈ ಮೂಲಕ ಕಾರ್ಮಿಕರ ಶ್ರಮ, ಹೆಚ್ಚು ಬಾಡಿಗೆ, ಔಷಧಿ ಸಿಂಪಡಿಸುವಾಗ ಅಸ್ವಸ್ಥರಾಗುವುದನ್ನು ಡ್ರೋಣ್ ತಪ್ಪಿಸಲಿದೆ.
10 ಹಾಗೂ 20 ಲೀಟರ್ ಸಾಮರ್ಥ್ಯದ ಟ್ಯಾಂಕ್ ಅನ್ನು ಈ ಡ್ರೋಣ್ ಹೊಂದಿದ್ದು, ಕೃಷಿ ಯಂತ್ರಧಾರೆ ಯೋಜನೆಯಡಿ ಸರ್ಕಾರ ಡ್ರೋಣ್ ಯಂತ್ರವನ್ನು ಸೇರಿಸಿದ್ರೆ ಚಾಮರಾಜನಗರದಲ್ಲಿ ಶೀಘ್ರವೇ ಬಾಡಿಗೆಗೆ ದೊರೆಯಲಿದೆ ಎಂದು ಕೆವಿಕೆಯ ರೇಷ್ಮೆ ವಿಜ್ಞಾನಿ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.