ಚಾಮರಾಜನಗರ:ಬಡವರು, ನಿರ್ಗತಿಕರಿಗೆ ವರದಾನವಾಗಿದ್ದ ಇಂದಿರಾ ಕ್ಯಾಂಟೀನ್ ಲಾಕ್ಡೌನ್ ವೇಳೆಯಲ್ಲೂ ಸಾರ್ಥಕ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ.
ಮಾ. 23ರಿಂದ ಏ.21ರ ವರೆಗೆ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು ಹಾಗೂ ಕೊಳ್ಳೇಗಾಲ ಒಳಗೊಂಡಂತೆ ಬರೋಬ್ಬರಿ 1.40 ಲಕ್ಷ ಊಟ ವಿತರಿಸಲಾಗಿದ್ದು, ರೋಗಿಗಳ ಸಂಬಂಧಿಕರು, ಸರ್ಕಾರಿ ನೌಕರರು ಇದರ ಫಲಾನುಭವಿಗಳಾಗಿದ್ದಾರೆ. ಪ್ರತಿ ತಿಂಗಳಿಗೆ 1.35 ಲಕ್ಷ ಊಟ ನೀಡಲು ಇಂದಿರಾ ಕ್ಯಾಂಟೀನ್ಗೆ ಅವಕಾಶವಿದ್ದರೂ ಲಾಕ್ಡೌನ್ ಇಲ್ಲದ ವೇಳೆ 2-3 ಸಾವಿರ ಊಟ ಕಡಿಮೆಯೇ ವಿತರಣೆಯಾಗುತ್ತಿತ್ತು.
ಆದರೆ, ಲಾಕ್ಡೌನ್ನಲ್ಲಿ ಎಲ್ಲಾ ಹೋಟೆಲ್, ಫಾಸ್ಟ್ ಪುಡ್ ಬಂದ್ ಆಗಿದ್ದರೂ ಹಸಿದವರಿಗೆ ಇಂದಿರಾ ಕ್ಯಾಂಟೀನ್ ಒಂದೇ ಆಧಾರವಾಗಿ 1.40 ಸಾವಿರ ಊಟ ಖರ್ಚಾಗಿದೆ. ಇದರಲ್ಲಿ 6 ಸಾವಿರ ಊಟ ಉಚಿತವಾಗಿ ನಿರ್ಗತಿಕರಿಗೆ ವಿತರಿಸಲಾಗಿದೆ. ಲಾಕ್ಡೌನ್ ವೇಳೆ ಕ್ಯಾಂಟೀನ್ಗೆ ಬಂದವರಿಗೆ ಯಾರೂ ಹಸಿವಿನಿಂದ ಹಿಂತಿರುಗದಂತೆ ನೋಡಿಕೊಳ್ಳಲಾಗಿದೆ. ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಸರ್ಕಾರಿ ನೌಕರರಿಗೂ ಇಂದಿರಾ ಕ್ಯಾಂಟೀನ್ ಹಸಿವು ನೀಗಿಸಿದೆ ಎಂದು ನಗರಾಭಿವೃದ್ಧಿ ನಿರ್ದೇಶಕ ಕೆ.ಸುರೇಶ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.