ಕರ್ನಾಟಕ

karnataka

ETV Bharat / state

ಸೂಕ್ತ ಚಿಕಿತ್ಸೆ ಕೊರತೆ: ಚಾಮರಾಜನಗರದಲ್ಲಿ ಹೆಚ್ಚಿದ ನವಜಾತ ಶಿಶು ಮರಣ ಪ್ರಮಾಣ - infants death rate

ಚಾಮರಾಜನಗರ ವೈದ್ಯಕೀಯ ಕಾಲೇಜಿನ ಅಧೀನದಲ್ಲಿ ಬರುವ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ವಿಭಾಗದಲ್ಲಿ ಒಬ್ಬ ನವಜಾತ ಶಿಶು ತಜ್ಞ ಸೇರಿ 8 ಮಂದಿ ಮಕ್ಕಳ ತಜ್ಞ ವೈದ್ಯರಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ನವಜಾತ ಶಿಶುಗಳು ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

chamarajanagar
ಚಾಮರಾಜನಗರ

By

Published : Aug 25, 2021, 12:18 PM IST

Updated : Aug 25, 2021, 12:44 PM IST

ಚಾಮರಾಜನಗರ: ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ವಿಭಾಗದಲ್ಲಿ ತಜ್ಞ ವೈದ್ಯರಿದ್ದರೂ ವೆಂಟಿಲೇಟರ್‌ ಸೌಲಭ್ಯದ ಕೊರತೆ ಹಾಗೂ ಸೂಕ್ತ ಚಿಕಿತ್ಸೆ ದೊರಕದೆ ಕಳೆದ ಒಂದು ವರ್ಷದ ಅವಧಿಯಲ್ಲಿ 55 ನವಜಾತ ಶಿಶುಗಳು ಮರಣ ಹೊಂದಿದ್ದು, 285 ಶಿಶುಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ.

ಚಾಮರಾಜನಗರ ವೈದ್ಯಕೀಯ ಕಾಲೇಜಿನ ಅಧೀನದಲ್ಲಿ ಬರುವ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ವಿಭಾಗದಲ್ಲಿ ಒಬ್ಬ ನವಜಾತ ಶಿಶು ತಜ್ಞ ಸೇರಿ 8 ಮಂದಿ ಮಕ್ಕಳ ತಜ್ಞ ವೈದ್ಯರಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ನವಜಾತ ಶಿಶುಗಳು ಸಾವನ್ನಪ್ಪುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ವೆಂಟಿಲೇಟರ್​-ವೈದ್ಯರ ಕೊರತೆ:ಮೃತಪಟ್ಟವರಲ್ಲಿ 27 ಒಬಿಸಿ, 14 ಎಸ್​ಸಿ, 8 ಎಸ್​ಟಿ ಸಮುದಾಯಕ್ಕೆ ಸೇರಿದ ಮಕ್ಕಳಾಗಿವೆ. ಚಾಮರಾಜನಗರ ವೈದ್ಯಕೀಯ ಕಾಲೇಜು ಆರಂಭವಾಗಿ ಐದು ವರ್ಷ ಕಳೆದರೂ ಇಡೀ ವಿಭಾಗಕ್ಕೆ ನವಜಾತ ಶಿಶು ತಜ್ಞ ವೈದ್ಯರ ನೇಮಕ ಆಗಿಲ್ಲ. ಹಾಗಾಗಿ ಗಂಭೀರ ಆರೋಗ್ಯ ಸಮಸ್ಯೆ ಹಾಗೂ ಅವಧಿಪೂರ್ವ ಜನಿಸುವ ಶಿಶುಗಳಿಗೆ ಸೂಕ್ತ ಆರೋಗ್ಯ ಸೇವೆ ಸಿಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನೆರೆಯ ಮೈಸೂರು ಜಿಲ್ಲೆಯ ಆಸ್ಪತ್ರೆಗಳಿಗೆ ವರ್ಗಾಹಿಸಲಾಗುತ್ತಿದೆ. ಇಡೀ ವಿಭಾಗದಲ್ಲಿ ನವಜಾತ ಶಿಶುಗಳಿಗೆ ಒಂದೇ ಒಂದು ವೆಂಟಿಲೇಟರ್‌ ಇಲ್ಲ. ಇನ್ನು ಮಕ್ಕಳಿಗಾಗಿ ಎರಡು ವೆಂಟಿಲೇಟರ್‌ಗಳಿವೆ.

ಅಂಕಿ-ಅಂಶಗಳು:2020–21ನೇ ಸಾಲಿನಲ್ಲಿ 1,167 ಮಕ್ಕಳು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅವುಗಳಲ್ಲಿ 838 ಗುಣಮುಖವಾಗಿ, 36 ಮಕ್ಕಳು ಸಾವನ್ನಪ್ಪಿದ್ದು, 229 ಶಿಶುಗಳನ್ನು ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. 2021–22ನೇ ಸಾಲಿನಲ್ಲಿ (ಜುಲೈ ಅಂತ್ಯದವರೆಗೆ) 418 ಮಕ್ಕಳು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, 19 ಮಕ್ಕಳು ಸಾವನ್ನಪ್ಪಿವೆ. 301 ಮಕ್ಕಳು ಗುಣಮುಖವಾಗಿದ್ದು, 56 ಶಿಶುಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ವೈದ್ಯರ ಸಲಹೆಯನ್ನು ನಿರ್ಲಕ್ಷಿಸಿ 93 ಶಿಶುಗಳನ್ನು ಪೋಷಕರು ಕರೆದೊಯ್ಯಿದಿದ್ದು ಇತರೆ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಿದ ಬಳಿಕ ಎಷ್ಟು ಶಿಶುಗಳು ಬದುಕುಳಿದಿವೆ ಎಂಬ ಮಾಹಿತಿ ಜಿಲ್ಲಾ ಆಸ್ಪತ್ರೆಯಲ್ಲಿಲ್ಲ.

ಚಾಮರಾಜನಗರ ಮೆಡಿಕಲ್‌ ಕಾಲೇಜಿನ ಡೀನ್‌ ಡಾ.ಸಂಜೀವ್‌

100 ಹಾಸಿಗೆಗಳ ಕೊಠಡಿ ಸಿದ್ಧ:ಕೋವಿಡ್‌ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಮುನ್ಸೂಚನೆಯ ಹಿನ್ನೆಲೆಯಲ್ಲಿ ಯಡಪುರದ ಬಳಿ ಇರುವ ಮೆಡಿಕಲ್‌ ಕಾಲೇಜಿನ ಹೊಸ ಆಸ್ಪತ್ರೆ ಕಟ್ಟಡದಲ್ಲಿ ಮಕ್ಕಳಿಗಾಗಿ 100 ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ. ನವಜಾತ ಶಿಶು ತುರ್ತು ಘಟಕ(ಎನ್‌ಐಸಿಯು) ನಿರ್ಮಿಸಿ 10 ವೆಂಟಿಲೇಟರ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಆ ವೆಂಟಿಲೇಟರ್‌ಗಳನ್ನೇ ಕೋವಿಡ್‌ ಮುಗಿದ ನಂತರ ನವಜಾತ ಶಿಶುಗಳ ಆರೈಕೆಗೆ ಬಳಸಿಕೊಳ್ಳಲಾಗುವುದು ಎಂದು ಚಾಮರಾಜನಗರ ಮೆಡಿಕಲ್‌ ಕಾಲೇಜಿನ ಡೀನ್‌ ಡಾ.ಸಂಜೀವ್‌ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಅವಧಿಗೂ ಪೂರ್ವ ಜನಿಸುವ ಮಕ್ಕಳ ಚಿಕಿತ್ಸೆಗಾಗಿ ನವಜಾತ ಶಿಶು ತಜ್ಞ ವೈದ್ಯರೇ ಬೇಕು. ಆದರೆ ನಮ್ಮಲ್ಲಿ ತಜ್ಞ ವೈದ್ಯರು ಹಾಗೂ ನರ್ಸಿಂಗ್‌ ಸಿಬ್ಬಂದಿ ಕೊರತೆ ಇದೆ. ವೆಂಟಿಲೇಟರ್‌ ಸೇರಿದಂತೆ ಇತರೆ ಸಲಕರಣೆಗಳು ಇಲ್ಲ. ಸದ್ಯ ಒಬ್ಬ ನವಜಾತ ಶಿಶು ತಜ್ಞ ವೈದ್ಯರಿದ್ದಾರೆ. ಹಾಗಾಗಿ ಮೈಸೂರಿಗೆ ರವಾನಿಸಲಾಗುತ್ತಿದೆ. ಇದು ಕಾಲ ಕ್ರಮೇಣ ಸರಿ ಹೋಗುತ್ತದೆ ಎಂಬುದು ಡೀನ್ ಅಭಿಪ್ರಾಯ.

2020ರಲ್ಲಿ ನವಜಾತ ಶಿಶು ಮರಣ ಪ್ರಮಾಣ ಶೇ.3.08 ಇದ್ದರೇ, ಈಗ ಅದು ಶೇ.4.55 ಆಗಿದೆ. ಈ ವರ್ಷ ಈಗಾಗಲೇ 55 ಶಿಶುಗಳು ಉಸಿರು ಚೆಲ್ಲಿವೆ.

Last Updated : Aug 25, 2021, 12:44 PM IST

ABOUT THE AUTHOR

...view details