ಚಾಮರಾಜನಗರ:ನಾಲ್ಕೈದುತಿಂಗಳಾದರೂ ವೃದ್ಧಾಪ್ಯ ವೇತನ, ವಿಧವಾ ವೇತನ ಬರದಿದ್ದರಿಂದ ಬೇಸತ್ತು ಪಿ.ಜಿ. ಪಾಳ್ಯದ ಫಲಾನುಭವಿಗಳು ಮತದಾನ ಬಹಿಷ್ಕರಿಸುವುದಾಗಿ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ದೂರು ನೀಡಿದ್ದಾರೆ.
ಕಳೆದ 4-5 ತಿಂಗಳಿನಿಂದ ಹಲವು ನೆಪಗಳನ್ನೊಡ್ಡಿ ಪಿಂಚಣಿಯನ್ನು ತಡೆ ಹಿಡಿದಿದ್ದಾರೆ. ಈಗ, ಮತ ಕೇಳಲು ಎಲ್ಲಾ ಅಭ್ಯರ್ಥಿಗಳು ಬರುತ್ತಿದ್ದು, ಪಿಂಚಣಿ ಕೊಡಿಸುವ ವ್ಯವಸ್ಥೆ ಮಾತ್ರ ಮಾಡಿಲ್ಲವೆಂದು ಆಕ್ರೋಶ ಹೊರಹಾಕಿದರು.
ಮತದಾನ ಬಹಿಷ್ಕಾರಕ್ಕೆ ಎಚ್ಚರಿಕೆ ನೀಡಿದ ಫಲಾನುಭವಿಗಳು ಸರ್ಕಾರದ ಸವಲತ್ತನ್ನೇ ನಮಗೆ ನೀಡದ ಮೇಲೆ ಸರ್ಕಾರದ ಭಾಗವಾಗಿ ನಾವೇಕೆ ಮತ ಚಲಾಯಿಸಬೇಕು? ಹಲವಾರು ಬಾರಿ ಮನವಿ ಮಾಡಿದರೂ ನಮಗೆ ಪಿಂಚಣಿ ಬಂದಿಲ್ಲವೆಂದು ಪಿಂಚಣಿದಾರರು ಅಳಲು ತೋಡಿಕೊಂಡಿದ್ದಾರೆ. ಪಿಂಚಣಿ ನೀಡಿದರೇ ಮತಹಾಕುತ್ತೇವೆ, ಇಲ್ಲವೆಂದರೇ ತಟಸ್ಥರಾಗುತ್ತೇವೆ ಎಂದು ಗ್ರಾಮದ 60ಕ್ಕೂ ಹೆಚ್ಚು ಮಂದಿ ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ, ಜನತಂತ್ರದ ಹಬ್ಬದಲ್ಲಿ ಪ್ರತಿವೊಬ್ಬರು ಪ್ರಜೆಯು ಮತದಾನದಲ್ಲಿ ಭಾಗಿಯಾಗುವಂತೆ ಮಾಡಬೇಕಿರುವುದು ಕಾರ್ಯಾಂಗದ ಕೆಲಸವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಮತದಾರರ ಕಷ್ಟವನ್ನು ಆಲಿಸಬೇಕಿದೆ.