ಚಾಮರಾಜನಗರ: ಕಾದಾಟದಲ್ಲಿ ಬಾಲ ಕಟ್ ಆಗಿದ್ದ ಸಲಗಕ್ಕೆ ಇಂದು ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಟ್ಟಿರುವ ಘಟನೆ ಕಾವೇರಿ ವನ್ಯಜೀವಿಧಾಮ ಸಂಗಮ ವಲಯದಲ್ಲಿ ನಡೆದಿದೆ.
ಬಾಲ ಕಟ್ ಆಗಿದ್ದ ಸಲಗಕ್ಕೆ ಚಿಕಿತ್ಸೆ: ನಿರಂತರ ನಿಗಾ ಇಡಲು ಮುಂದಾದ ಅರಣ್ಯ ಇಲಾಖೆ
ಬಾಲ ಕಟ್ ಆಗಿ ಗಾಯಗೊಂಡಿರುವ ಆನೆಯೊಂದು ನೋವು ತಾಳಲಾರದೆ ನೀರಿನಲ್ಲೇ ಇತ್ತು. ಇದರ ಮೇಲೆ ನಿಗಾ ಇಟ್ಟಿದ್ದ ಅರಣ್ಯ ಸಿಬ್ಬಂದಿ, ದಸರಾ ಆನೆಗಳಾದ ಗೋಪಾಲಸ್ವಾಮಿ ಹಾಗೂ ಅಭಿಮನ್ಯು ಆನೆಗಳ ಸಹಾಯ ಪಡೆದು ಗಾಯಗೊಂಡ ಆನೆಗೆ ಅರಿವಳಿಕೆ ನೀಡಿ ಮತ್ತೆ ಕಾಡಿಗೆ ಬಿಟ್ಟಿದ್ದಾರೆ.
ಕಾದಾಟದಲ್ಲಿ ಬಾಲ ಕಳೆದುಕೊಂಡು ನೋವು ಮತ್ತು ನೊಣಗಳಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ನಿಂತಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಕಳೆದ ಮೂರು ದಿನಗಳಿಂದ ನಿಗಾ ಇಟ್ಟಿದ್ದರು. ಇಂದು ಗೋಪಾಲಸ್ವಾಮಿ ಹಾಗೂ ಅಭಿಮನ್ಯು ಆನೆಗಳ ಸಹಾಯ ಪಡೆದು ಡಾ. ಉಮಾಶಂಕರ್ ಮತ್ತು ಡಾ. ಮಂಜುನಾಥ್ ಸಲಗಕ್ಕೆ ಅರಿವಳಿಕೆ ನೀಡಿ ಆ್ಯಂಟಿಬಯೋಟಿಕ್ ಮತ್ತು ನೋವು ನಿವಾರಕ ಚುಚ್ಚುಮದ್ದು ನೀಡಿದ್ದಾರೆ. ಗಾಯ ಮಾಯುವ ತನಕ ನಿರಂತರ ನಿಗಾ ಇಡಲು ಅರಣ್ಯ ಇಲಾಖೆ ಉದ್ದೇಶಿಸಿದೆ.
ಈ ಕುರಿತು ಕಾವೇರಿ ವನ್ಯಜೀವಿಧಾಮದ ಡಿಎಫ್ಒ ರಮೇಶ್ ಈಟಿವಿ ಭಾರತದ ಜೊತೆ ಮಾತನಾಡಿ, ಸಲಗಕ್ಕೆ 25 ವರ್ಷ ವಯಸ್ಸಾಗಿದೆ. ಲದ್ದಿ, ಗಂಜಲದಿಂದಾಗಿ ಗಾಯ ಹರಡಿ ಹುಳು ಬಂದಿತ್ತು. ಬೆಲ್ಲ ಹಾಗೂ ಹುಲ್ಲಿಗೆ ಆ್ಯಂಟಿಬಯೋಟಿಕ್ ನೀಡಲು ಉದ್ದೇಶಿಸಲಾಗಿದೆ. ಇಂದು 50ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದು, ನಮ್ಮ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.