ಕೊಳ್ಳೇಗಾಲ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ದೆಹಲಿಯಲ್ಲಿ ಆರು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಇದನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಹಾಗೂ ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ತಾಲೂಕಿನಾದ್ಯಂತ ರೈತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದರು.
ಕೃಷಿ ಕಾಯ್ದೆ ಹಿಂಪಡೆಯುವಂತೆ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ - ಕರಾಳ ದಿನಾಚರಣೆ
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಆರಂಭವಾದ ರೈತ ಹೋರಾಟಕ್ಕೆ ಇಂದಿಗೆ 6 ತಿಂಗಳು ಕಳೆದ ಹಿನ್ನೆಲೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ರೈತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ್ದಾರೆ.
ಕೊರೊನಾ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ರೈತ ಸಂಘದವರು ತಮ್ಮ ಗ್ರಾಮದ ರಸ್ತೆ ಹಾಗೂ ಜಮೀನು, ಮನೆಗಳಲ್ಲಿ ನಿಂತು ಕಪ್ಪು ಬಾವುಟ ಪ್ರದರ್ಶಿಸಿದ್ದು, ತೋಳಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ತಾಲೂಕು ರೈತ ಸಂಘದ ಅಧ್ಯಕ್ಷ ಗೌಡೇಗೌಡ ಮಾತನಾಡಿ, ಮೂರು ಅವೈಜ್ಞಾನಿಕ ಕೃಷಿ ಕಾಯ್ದೆ ರದ್ದತಿಯ ಹೋರಾಟಕ್ಕೆ ಈಗಾಗಲೇ ಆರು ತಿಂಗಳಾಗಿದೆ. ಆದರೆ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸಿ ಕುಳಿತಿದೆ. ಆದ್ದರಿಂದ ನಾವಿಂದು ಕರಾಳ ದಿನಾಚರಣೆ ಮಾಡುತ್ತಿದ್ದೇವೆ. ಕೂಡಲೆ ಎಚ್ಚೆತ್ತು ಸರ್ಕಾರ ತಂದಿರುವ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದಿದ್ದಾರೆ.