ಚಾಮರಾಜನಗರ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಗ್ರಾಮದ ಮುಖಂಡರು ಅಮಾನವೀಯವಾಗಿ ನಡೆದುಕೊಂಡು ದಂಪತಿಗೆ ಬಹಿಷ್ಕಾರ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಗರ - ಮಾಂಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಖಂಡರುಗಳಾದ ವೆಂಕಟಶೆಟ್ಟಿ, ಮಹದೇವ, ಕಣ್ಣಪ್ಪ ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಏನಿದು ಬಹಿಷ್ಕಾರ ಪ್ರಕರಣ:ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಯಜಮಾನರು 3 ಲಕ್ಷ ದಂಡ ಹಾಕಿ ಗ್ರಾಮದಿಂದ ಹೊರ ಉಳಿಯುವಂತೆ ಬಹಿಷ್ಕಾರ ಹಾಕಿದ್ದಾರೆ ಎಂದು ಕೊಳ್ಳೇಗಾಲ ಡಿವೈಎಸ್.ಪಿ ಕಚೇರಿಗೆ ಗೋವಿಂದರಾಜು ಹಾಗೂ ಶ್ವೇತಾ ದೂರು ಕೊಟ್ಟು ಅಳಲು ತೋಡಿಕೊಂಡಿದ್ದರು.
ಗೋವಿಂದರಾಜು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೂವಿನ ಕೊಪ್ಪಲು ಗ್ರಾಮದ ದಲಿತ ಜನಾಂಗಕ್ಕೆ ಸೇರಿದ ಪ್ರಕಾಶ್ ಎಂಬುವರ ಮಗಳಾದ ಶ್ವೇತಾ ಜೊತೆ ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ 5 ವರ್ಷಗಳ ಹಿಂದೆ ಮಳವಳ್ಳಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಗೋವಿಂದರಾಜು ಮಳವಳ್ಳಿಯಲ್ಲಿ ಮನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಆಗಾಗ ಗೋವಿಂದರಾಜು ಹಾಗೂ ಶ್ವೇತಾ ಕುಣಗಳ್ಳಿ ಗ್ರಾಮಕ್ಕೆ ಬಂದು ಹೋಗುತ್ತಾ, ಐದು ವರ್ಷಗಳಿಂದ ಜೀವನ ನಡೆಸುತ್ತಿದ್ದರು.
ಆದರೆ, ಗೋವಿಂದರಾಜು ಅವರ ಮನೆಯಲ್ಲಿ ಅಂತರ್ಜಾತಿ ವಿವಾಹ ತಿಳಿದಿದ್ದರೂ ಮನೆಯವರು ಯಾರೂ ತೊಂದರೆ ನೀಡಲಿಲ್ಲ. ತಿಂಗಳಿಗೆ 2 ರಿಂದ 3 ಬಾರಿ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಆದರೆ ಗೋವಿಂದರಾಜು ಅವರ ಅಕ್ಕಪಕ್ಕದ ನಿವಾಸಿಗಳು ಅಂತರ್ಜಾತಿ ವಿವಾಹದ ಬಗ್ಗೆ ಮಾಹಿತಿ ಪಡೆದು ಶ್ವೇತಾ ನಮ್ಮ ಜಾತಿಯವಳಲ್ಲ, ಅವಳು ದಲಿತ ಜನಾಂಗಕ್ಕೆ ಸೇರಿದವಳು ಎಂದು ಪಕ್ಕದ ಮನೆಯವರಾದ ಜಯಲಕ್ಷ್ಮಿ, ಮಧು, ರಂಗಸ್ವಾಮಿ, ಕುಳ್ಳ, ಮಹದೇವಪ್ಪ ಮಹದೇವ ಶೆಟ್ಟಿ ಇವರುಗಳು ಗ್ರಾಮದ ಯಜಮಾನರುಗಳಿಗೆ ಮಾಹಿತಿ ನೀಡಿ ಎರಡರಿಂದ ಮೂರು ಬಾರಿ ಪಂಚಾಯಿತಿ ನಡೆಸಿ ದಂಡ ಕಟ್ಟಬೇಕು ಎಂದು ಸೂಚಿಸಿದ್ದರು.
ದಂಡ ಕಟ್ಟದಿದ್ದಲ್ಲಿ ದಂಪತಿಗೆ ಅಂಗಡಿಗಳಲ್ಲಿ ಅಕ್ಕಿ, ತರಕಾರಿ, ಹಾಲು ನೀಡುವುದಿಲ್ಲ, ನೀರನ್ನು ಸಹ ತೆಗೆದುಕೊಳ್ಳುವಂತಿಲ್ಲ ಎಂದು ಮುಖಂಡರು ತೀರ್ಪು ನೀಡಿದ್ದರು. ಗ್ರಾಮದ ಯಜಮಾನರಾದ ವೆಂಕಟಶೆಟ್ಟಿ, ಮಹದೇವ, ಮೊಂಡಶೆಟ್ಟಿ, ಕಣ್ಣಪ್ಪ, ನಂಜಶೆಟ್ಟಿ, ಮಹದೇವ ಶೆಟ್ಟಿ, ಸಿದ್ದೇಶ್, ಪಂಚಾಯಿತಿ ಮಾಡಿ ನೀವು ತಪ್ಪು ಮಾಡಿದ್ದೀರಾ ಆ ಕಾರಣ 3 ಲಕ್ಷ ದಂಡ ಕಟ್ಟಬೇಕು ಎಂದು ಮಾರ್ಚ್ 1 ರಂದು ಕೊನೆಯ ದಿನಾಂಕ ನೀಡಿದ್ದರು.