ಚಾಮರಾಜನಗರ: ಕಬ್ಬು ತುಂಬಿದ ಲಾರಿಗಳನ್ನು ತಡೆದು ಕಬ್ಬಿನ ಜಲ್ಲೆಗಳನ್ನು ಗಜಪಡೆ ಸ್ವಾಹ ಮಾಡುವುದು ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮಾನ್ಯವಾಗಿದೆ. ಆನೆಗಳು ಭರ್ಜರಿ ಊಟ ಸವಿದರೆ, ವಾಹನ ಸವಾರರು ಸೆಲ್ಫಿ ಹುಚ್ಚಾಟ ತೋರುತ್ತಿದ್ದಾರೆ.
ತಮಿಳುನಾಡು - ಕರ್ನಾಟಕ ಗಡಿಯಾದ ಕಾರೇಪಾಲಂ ಸಮೀಪ ಮಂಗಳವಾರ ಸಂಜೆ ಮರಿ ಸೇರಿದಂತೆ ಮೂರು ಆನೆಗಳು ಕಬ್ಬು ತುಂಬಿದ ಲಾರಿಯನ್ನು ತಡೆದು ಕಬ್ಬು ತಿನ್ನುತ್ತಿರುವ ವಿಡಿಯೋವನ್ನು ವಾಹನ ಸವಾರರೊಬ್ಬರು ಸೆರೆ ಹಿಡಿದು ಈಟಿವಿ ಭಾರತಕ್ಕೆ ನೀಡಿದ್ದಾರೆ.
ಟ್ರಾಫಿಕ್ ಜಾಂ:
ಕಾರೇಪಾಲಂನ ಈ ಪ್ರದೇಶ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರಲಿದ್ದು, ಈ ಹಿಂದೆ ಕೇವಲ ರಾತ್ರಿ ವೇಳೆಯಲ್ಲಷ್ಟೇ ಗಜಪಡೆ ರಸ್ತೆಗಿಳಿಯುತ್ತಿದ್ದವು. ಆದರೆ, ಮರಿ ಜೊತೆ ಇರುವ ಎರಡು ಆನೆಗಳು ಹಗಲು ಹೊತ್ತಿನಲ್ಲೇ ಲಾರಿ ತಡೆದು ಕಬ್ಬು ಸ್ವಾಹ ಮಾಡುತ್ತಿದ್ದು, ನಿತ್ಯ ಅರ್ಧ-ಮುಕ್ಕಾಲು ತಾಸು ಟ್ರಾಫಿಕ್ ಜಾಂ ಉಂಟಾಗುತ್ತಿದೆ. ಮೂರು ಆನೆಗಳು ಕಬ್ಬು ತಿನ್ನುತ್ತಿರುವ ವಿಡಿಯೋ, ಪೋಟೋ ಸೆರೆಹಿಡಿಯಲು ವಾಹನಗಳನ್ನು ನಿಲ್ಲಿಸಿ ಸವಾರರು ಹುಚ್ಚಾಟ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.