ಚಾಮರಾಜನಗರ:ಇಲ್ಲಿಗೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೂಢನಂಬಿಕೆಯನ್ನು ಸಿದ್ದರಾಮಯ್ಯ ತೊಲಗಿಸಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪ ಚಾಮರಾಜನಗರಕ್ಕೆ ಬರಬೇಕು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಮನವಿ ಮಾಡಿದ್ದಾರೆ.
ಮೂಢನಂಬಿಕೆ ಬದಿಗಿಟ್ಟು ಚಾಮರಾಜನಗರಕ್ಕೆ ಬನ್ನಿ: ಬಿಎಸ್ವೈಗೆ ಮಾಜಿ ಸಂಸದ ಧ್ರುವನಾರಾಯಣ ಮನವಿ - ಮಾಜಿ ಎಂಪಿ ಧ್ರುವನಾರಾಯಣ
ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುವ ಮೂಢನಂಬಿಕೆ ಬಿಟ್ಟು ಜಿಲ್ಲೆಗೆ ಬನ್ನಿ ಎಂದು ಸಿಎಂ ಯಡಿಯೂರಪ್ಪನವರಿಗೆ ಮಾಜಿ ಸಂಸದ ಧ್ರುವನಾರಾಯಣ ಮನವಿ ಮಾಡಿದ್ರು.
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ರಾಜೀವ್ ಗಾಂಧಿ ಮತ್ತು ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಾಕಷ್ಟು ಬಾರಿ ಇಲ್ಲಿಗೆ ಬಂದು ಜಿಲ್ಲೆಗಂಟಿದ್ದ ಕಳಂಕ ತೊಳೆದಿದ್ದಾರೆ. ಆದ್ದರಿಂದ, ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಸಾಕಷ್ಟು ಅನುದಾನವನ್ನು ಜಿಲ್ಲೆಗೆ ತರಬೇಕು. ಪಕ್ಷಾತೀತವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಟೆಲಿಕಾಂ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ ರಾಜೀವ್ ಗಾಂಧಿ ಅವರು ಜವಾಹರ್ ನವೋದಯ ಶಾಲೆಗಳ ಮೂಲಕ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಕಾರ್ಯಗಳನ್ನು ಸ್ಮರಿಸಿದರು.