ಕರ್ನಾಟಕ

karnataka

ETV Bharat / state

ಸಚಿವನಾಗುವ ಕನಸು ಈಡೇರಿಲ್ಲ, ಇದೇ ವಿಧಿಯಾಟ : ಬೇಸರ ಹೊರಹಾಕಿದ ಶಾಸಕ ಪುಟ್ಟರಂಗಶೆಟ್ಟಿ - ಮಾನವೀಯತೆ ಮೆರೆದ ಹೆಬ್ಬಾಳ್ಕರ್

ಈ ಬಾರಿಯೂ ಸಚಿವನಾಗುವ ಕನಸು ಈಡೇರಲಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಬೇಸರ ವ್ಯಕ್ತಪಡಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

mla-puttarangashetty
ಶಾಸಕ ಪುಟ್ಟರಂಗಶೆಟ್ಟಿ

By ETV Bharat Karnataka Team

Published : Aug 28, 2023, 4:42 PM IST

ಚಾಮರಾಜನಗರ: ಈ ಬಾರಿಯೂ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಶಾಸಕ ಪುಟ್ಟರಂಗಶೆಟ್ಟಿ ನಗುನಗುತ್ತಲೇ ಬೇಸರ ಹೊರಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ನಗರದ ಡಾ.ರಾಜ್ ಕುಮಾರ್​ ರಂಗಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ನಡೆದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಂತ್ರಿ ಆಗುವ ಕನಸು ಕಂಡಿರಲಿಲ್ಲ ಎಂದು ಹೇಳಿದರು. ಹಾಗೆಯೇ ನಾನು ಕೂಡ ಶಾಸಕ ಆಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಆದರೆ 4 ಬಾರಿ ಶಾಸಕನಾದೆ. ಈ ಬಾರಿ ಮಂತ್ರಿ ಆಗುತ್ತೇನೆ ಎಂದು ಕನಸು ಕಂಡಿದ್ದೆ. ಆದರೆ ಆ ರೀತಿ ಆಗಲಿಲ್ಲ. ಇದನ್ನೇ ವಿಧಿಯಾಟ ಎನ್ನುವುದು ಎಂದು ಹೇಳಿದರು.

ರಾಜಕಾರಣದಲ್ಲಿ ಒಂದು ನಿಮಿಷ, ಒಂದು ಗಳಿಗೆಯಲ್ಲಿ ಏನು ಬೇಕಾದರೂ ಆಗಬಹುದು. ಹೀಗೆ ಆಗಬೇಕು ಎಂದು ನಮ್ಮ ಹಣೆಬರಹದಲ್ಲಿ ಮೊದಲೇ ಬರೆದಿರುತ್ತದೆ ಎಂದು ಹೇಳಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ನಮ್ಮ ಇಲಾಖೆ ಅಧಿಕಾರಿಗಳು ಸನ್ಮಾನ ಮಾಡುವುದಾಗಿ ಹೇಳಿದರು. ಸನ್ಮಾನ ಸ್ವೀಕರಿಸುವ ಕೆಲಸ ಆ. 30ರ ನಂತರ ಮಾಡುತ್ತೇನೆ ಎಂದು ಹೇಳಿದೆ. ಇದು ಕೇವಲ ಟ್ರೇಲರ್ ಅಷ್ಟೇ. ಪಿಕ್ಚರ್ ಇನ್ನೂ ಬಾಕಿ ಇದೆ. ಅಭಿ ತೋ ಎ ಶುರುವಾತ್ ಹೇ ಎಂದು ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದೆ. ಇನ್ನೂ 5 ವರ್ಷ ಬಾಕಿಯಿದೆ. ಗೃಹಲಕ್ಷ್ಮಿ ಯೋಜನೆ ಬರುವುದಕ್ಕೂ, ನಮ್ಮ ತಂದೆ-ತಾಯಿ ನನಗೆ ಲಕ್ಷ್ಮಿ ಎಂದು ಹೆಸರು ಇಡುವುದಕ್ಕೂ ಸಾಮ್ಯತೆ ಇದೆ. ನಾನು ಮಂತ್ರಿ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಬಹಳಷ್ಟು ಹೋರಾಟ ಮಾಡಿ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿದರು.

ಮಾನವೀಯತೆ ಮೆರೆದ ಹೆಬ್ಬಾಳ್ಕರ್​ :ಬೈಕ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಇಬ್ಬರು ಯುವಕರನ್ನು ಆಸ್ಪತ್ರೆಗೆ ಸಾಗಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಕರಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಚಾಮರಾಜನಗರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಚಿವೆ ಮಂಡ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ನಗರದ ಹೊರವಲಯದ ಸಂತೇಮರಳ್ಳಿ ಮುಖ್ಯ ರಸ್ತೆಯ ದೊಡ್ಡಪೇಟೆ ಕ್ರಾಸ್ ಬಳಿ ಬೈಕ್​ ಮತ್ತು ಆಟೋ‌ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಇದೇ ಮಾರ್ಗದಲ್ಲಿ ಚಲಿಸುತ್ತಿದ್ದ ಸಚಿವರು, ತಮ್ಮ ಕಾರನ್ನು ನಿಲ್ಲಿಸಿ ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ಇದನ್ನೂ ಓದಿ :ಸದ್ಯ ನಾನು ಬಿಜೆಪಿ ಶಾಸಕ, ಭವಿಷ್ಯದಲ್ಲಿ ಏನಾಗಬಹುದೆಂದು ಹೇಳಲು ಜ್ಯೋತಿಷಿಯಲ್ಲ: ಶಾಸಕ ಶಿವರಾಮ್ ಹೆಬ್ಬಾರ್

ABOUT THE AUTHOR

...view details