ಚಾಮರಾಜನಗರ: ಗಂಡ ಸತ್ತನೆಂದು ಕೈ ಕಟ್ಟಿ ಕೂರದೇ ಹಠ ತೊಟ್ಟ ಶಿಕ್ಷಕಿಯೊಬ್ಬರು, ಹೂ ಮಾರುವ ಮೂಲಕ ಬದುಕು ಕಟ್ಟಿಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಸ್ವಾಭಿಮಾನದ ಪ್ರತಿರೂಪವಾಗಿರುವ ಯಶೋಗಾಥೆ ಇಲ್ಲಿದೆ ನೋಡಿ.
ಡಿಎಡ್ ಪದವೀಧರೆಯ ಸ್ವಾಭಿಮಾನದ ಬದುಕು, ವಿಧವೆ ಬಾಳಿಗೆ ಬೆಳಕಾಯ್ತು ಹೂವು.. ಉತ್ತಮ ಶಿಕ್ಷಕಿಯಾಗುವ ಕನಸು ಕಂಡು ಅದರಂತೆ ಡಿಎಡ್ ನಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಯಾದ ನಗರದ ಚೆನ್ನಿಪುರಮೋಳೆಯ ಮಾಲಾ (38) ಅವರಿಗೆ ಕೈ ಹಿಡಿದಿದ್ದು ಮಾತ್ರ ಹೂ ಮಾರಾಟ. ಅಚಾನಕ್ಕಾಗಿ ಪತಿ ಮೃತಪಟ್ಟಾಗ ಎರಡು ಹೆಣ್ಣು ಮಕ್ಕಳ ಜವಾಬ್ದಾರಿ ಹೆಗಲ ಮೇಲೆರಿಸಿಕೊಂಡಿದ್ದರು ಮಾಲಾ. ಖಾಸಗಿ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ದುಡಿದು ಸಂಸಾರದ ನೊಗ ಹೊರುವುದು ಕಷ್ಟ ಎಂದರಿತು ಹೂವಿನ ಹಾರಗಳ ಮಾರಾಟ ಮಾಡಲು ಮುಂದಾಗಿದ್ದಾರೆ.
ಚೆನ್ನಿಪುರಮೋಳೆಯ ಬಹುಪಾಲು ಮಂದಿಯ ಕೆಲಸ ಹೂ ಮಾರಾಟ. ಅದನ್ನೇ ಆಯ್ದುಕೊಂಡ ಮಾಲಾ ಆರಂಭದಲ್ಲಿ ಕೇವಲ 5 ಕೆಜಿ ಹೂ ಮಾರಾಟದಲ್ಲಿ ತೊಡಗಿಸಿಕೊಂಡರು. ಹಾರ, ಬೊಕ್ಕೆ ಮಾಡುವುದನ್ನು ಕಲಿತು ಈಗ ದಿನವೊಂದಕ್ಕೆ ಸರಾಸರಿ 30-40 ಕೆಜಿ ಹೂ ಮಾರಾಟ ಮಾಡುತ್ತಿದ್ದಾರೆ. ಹಿರಿಯ ಮಗಳು ಪದವಿ ಓದುತ್ತಿದ್ದು, ಕಿರಿಯ ಮಗಳು ಪಿಯು ಮಾಡುತ್ತಿದ್ದಾಳೆ.
ಮಾಲಾ ಮಾಡುತ್ತಿರುವ ಸಣ್ಣ ಉದ್ಯೋಗದ ಮೂಲಕವೇ ದೊಡ್ಡ ಯಶಸ್ಸು ಕಂಡಿದ್ದಾರೆ. ಪತಿ ಇಲ್ಲವಾದಾಗ ಸಂಸಾರದ ಜವಾಬ್ದಾರಿ ಹೊತ್ತು ಜೀವನದಲ್ಲಿ ಯಶ ಕಂಡಿರುವ ಇವರು ಹಲವಾರು ನಿರುದ್ಯೋಗಿಗಳಿಗೆ ಮಾದರಿಯಾಗಿದ್ದಾರೆ. ಶ್ರದ್ಧೆ, ಶ್ರಮದಿಂದ ಕೆಲಸ ಮಾಡಿದರೆ ಯಶಸ್ಸು ಶತಃಸಿದ್ಧ ಎಂಬುದಕ್ಕೆ ಇವರು ನಿದರ್ಶನ.