ಗುಂಡ್ಲುಪೇಟೆ(ಚಾಮರಾಜನಗರ): ಪಟ್ಟಣದ ಮಹದೇವಪ್ರಸಾದ್ ನಗರದಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆ ಹೌಸಿಂಗ್ ಬೋರ್ಡ್ ಬಡಾವಣೆಯ 100 ಮೀಟರ್ ರಸ್ತೆಯನ್ನ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಗುಂಡ್ಲುಪೇಟೆ: ಮಹದೇವಪ್ರಸಾದ್ ನಗರ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಹದೇವಪ್ರಸಾದ್ ನಗರದ ನಿವಾಸಿ 39 ವರ್ಷದ ತರಕಾರಿ ಟೆಂಪೋ ಚಾಲಕನಿಗೆ ನೆಗಡಿ, ಜ್ವರವಿದ್ದ ಹಿನ್ನೆಲೆ ಜೂ. 17ರಂದು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡಿದ್ದಾನೆ. ಈ ವೇಳೆ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈತ ತಮಿಳುನಾಡಿಗೆ ತರಕಾರಿ ಸೇರಿದಂತೆ ಇತರೆ ದಿನ ಬಳಕೆ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಈತನ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 10 ಮಂದಿಯನ್ನ ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಲಾಗಿದೆ.
ಡಿಸಿ-ಎಸ್ಪಿ ಭೇಟಿ:ಮಹದೇವಪ್ರಸಾದ್ ನಗರಕ್ಕೆ ಎಸ್ಪಿ ಆನಂದಕುಮಾರ್ ಜೊತೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೊರೊನಾ ದೃಢಪಟ್ಟ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಮಾಹಿತಿ ಕಲೆಹಾಕುವಂತೆ ತಹಶೀಲ್ದಾರ್ ನಂಜುಂಡಯ್ಯ ನೇತೃತ್ವದಲ್ಲಿ ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡಕ್ಕೆ ಸೂಚಿಸಿದ್ದಾರೆ. ಅಲ್ಲದೆ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಮಕ್ಕಳು, ವೃದ್ಧರ ಬಗ್ಗೆ ಅಂಕಿ-ಅಂಶಗಳನ್ನು ಅಧಿಕಾರಿಗಳು ನೀಡಬೇಕು. ಜೊತೆಗೆ ಈ ಏರಿಯಾದಿಂದ ಯಾವೊಬ್ಬ ವ್ಯಕ್ತಿಯು ಅನವಶ್ಯಕವಾಗಿ ಓಡಾಡಬಾರದು ಎಂದು ಸೂಚಿಸಿದ್ದಾರೆ.
ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಭೇಟಿ:ಸ್ಥಳಕ್ಕೆ ಸ್ಥಳೀಯ ಶಾಸಕ ನಿರಂಜನ್‍ಕುಮಾರ್ ಭೇಟಿ ನೀಡಿ, ಕೊರೊನಾ ದೃಢಪಟ್ಟ ವ್ಯಕ್ತಿ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಸುತ್ತಮುತ್ತಲ ಪರಿಸರ ಸ್ವಚ್ಛಗೊಳಿಸಿ, ಪೂರ್ತಿ ಬಡಾವಣೆಯನ್ನ ಸ್ಯಾನಿಟೈಸ್ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದಾರೆ.